ತ್ವಚೆಯ ಆರೋಗ್ಯಕ್ಕೆ ಡ್ರ್ಯಾಗನ್ ಫ್ರೂಟ್

| ಕುಬೇರಪ್ಪ ಎಂ. ವಿಭೂತಿ ಹರಿಹರ

ಡ್ರ್ಯಾಗನ್ ಹಣ್ಣಿನ ಪರಿಚಯ ಹೆಚ್ಚಿನವರಿಗೆ ಇರಲಿಕ್ಕಿಲ್ಲ. ಅಮೆರಿಕ, ಮೆಕ್ಸಿಕೋ ದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈಚೆಗೆ ಭಾರತದಲ್ಲಿಯೂ ಇದು ಜನಪ್ರಿಯವಾಗುತ್ತಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಹೇರಳವಾಗಿವೆ. ದುಬಾರಿಯಾದರೂ ಸಾಕಷ್ಟು ಪೌಷ್ಟಿಕಾಂಶಗಳನ್ನು ಹಣ್ಣು ಇದು. ಸೌಂದರ್ಯವರ್ಧನೆಗೂ ಇದು ಸಹಕಾರಿ.

ಬಳಸುವುದು ಹೇಗೆ

  • ಅರ್ಧಭಾಗ ಡ್ರ್ಯಾಗನ್ ಹಣ್ಣನ್ನು ನುಣ್ಣಗೆ ರುಬ್ಬಿ, ಅದಕ್ಕೆ ಒಂದು ಟೀ ಚಮಚ ಮೊಸರು ಸೇರಿಸಿ ಫೇಸ್​ಪ್ಯಾಕ್ ತಯಾರಿಸಬೇಕು. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಇದನ್ನು ಲೇಪಿಸಿ 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿದರೆ, ಮುಖದಲ್ಲಿನ ವಯಸ್ಸಾದ ಲಕ್ಷಣಗಳು, ನೆರಿಗೆಗಳು, ಕಪ್ಪು ಕಲೆಗಳು, ಸುಕ್ಕಿನ ಲಕ್ಷಣಗಳು ಕಡಿಮೆಯಾಗುತ್ತವೆ. ವಾರಕ್ಕೊಮ್ಮೆ ಈ ರೀತಿ ಮಾಡುವುದು ಪರಿಣಾಮಕಾರಿ.
  • ಕಾಲುಭಾಗ ಡ್ರ್ಯಾಗನ್ ಹಣ್ಣನ್ನು ಪೇಸ್ಟ್ ಮಾಡಿ, ಹತ್ತಿಯಲ್ಲಿ ಅದ್ದಿ ಮೊಡವೆಗಳ ಮೇಲೆ ಇಡಬೇಕು.
  • 20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುವುದರಿಂದ ಮೊಡವೆಗಳು ಕ್ರಮೇಣ ಕಡಿಮೆಯಾಗುತ್ತವೆ.
  • ಹಣ್ಣಿನ ಕಾಲು ಭಾಗವನ್ನು ತೆಗೆದು ಪೇಸ್ಟ್ ತಯಾರಿಸಿಕೊಳ್ಳಬೇಕು. ಅದಕ್ಕೆ ವಿಟಮಿನ್ ಇ ಮಾತ್ರೆಗಳನ್ನು ಬೆರೆಸಿ ಮಿಶ್ರಣವನ್ನು ಸನ್​ಬರ್ನ್ ಆದ ತ್ವಚೆಯ ಭಾಗಕ್ಕೆ ಹಚ್ಚಬೇಕು. 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ಎರಡು ದಿನಗಳಿಗೆ ಒಮ್ಮೆ ಹೀಗೆ ಮಾಡುವುದರಿಂದ ಕ್ರಮೇಣ ಸನ್​ಬರ್ನ್ ನಿಂದಾದ ಕಲೆಗಳು ದೂರಾಗುತ್ತವೆ.
  • ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಡ್ರ್ಯಾಗನ್ ಹಣ್ಣು ಸೇವಿಸುವುದು ತ್ವಚೆಯ ಆರೋಗ್ಯಕ್ಕೆ ಉತ್ತಮ. ಡಯಟ್ ಮಾಡುವವರಿಗೂ ಉಪಯುಕ್ತ. ಇದರ ಜ್ಯೂಸ್ ತಯಾರಿಸಿ ನಿತ್ಯ ಬೆಳಗ್ಗೆ ಕುಡಿಯುವುದ ರಿಂದ ದೇಹದಲ್ಲಿನ ಟಾಕ್ಸಿನ್ ಹೊರಹೋಗು ತ್ತವೆ. ಇದರಿಂದ ಚರ್ಮದ ಕಾಂತಿ ವೃದ್ಧಿಸುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಹೊಳಪಿಗೆ ಸಹಕಾರಿ. ಹಣ್ಣಿನ ಜ್ಯೂಸ್​ಗೆ ಜೇನುತುಪ್ಪ, ಕಾಳುಮೆಣಸಿನ ಪುಡಿ ಬೆರೆಸಿಯೂ ಸೇವಿಸಬಹುದು.
  • ಈ ಹಣ್ಣಿನ ಪೇಸ್ಟ್​ಗೆ ಜೇನುತುಪ್ಪ, ಗುಲಾಬಿಜಲವನ್ನು ಸೇರಿಸಿ ಮುಖಕ್ಕೆ ಮಸಾಜ್ ಮಾಡಬೇಕು. ನಿತ್ಯ ಹೀಗೆ ಮಾಡುವುದರಿಂದ ಒಣತ್ವಚೆ ಇರುವವರಿಗೆ ಉತ್ತಮ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಇದು ಪರಿಣಾಮಕಾರಿ.
  • ಕೂದಲ ಆರೈಕೆಗೂ ಡ್ರ್ಯಾಗನ್ ಹಣ್ಣು ಉತ್ತಮ. ಎರಡು ತಾಜಾ ಹಣ್ಣುಗಳನ್ನು ತೆಗೆದುಕೊಂಡು ನುಣ್ಣನೆಯ ಪೇಸ್ಟ್ ತಯಾರಿಸಿಕೊಂಡು ಕೂದಲು ಮತ್ತು ತಲೆಯ ಭಾಗಕ್ಕೆ ಮಸಾಜ್ ಮಾಡಬೇಕು. 15 ನಿಮಿಷಗಳ ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆಯಬಹುದು. ಹೀಗೆ ಮಾಡುವುದರಿಂದ ಕೂದಲಿಗೆ ನೈಸರ್ಗಿಕ ಬಣ್ಣ ಬರುತ್ತದೆ. ಕೇಶ ಕಾಂತಿಯುತವಾಗಿರುತ್ತದೆ.
  • ಇದರಲ್ಲಿ ಯಥೇಚ್ಛವಾಗಿ ಕಬ್ಬಿಣದ ಅಂಶ ಇರುತ್ತದೆ. ಹಾಗಾಗಿ, ಈ ಹಣ್ಣಿನ ನಿಯಮಿತ ಸೇವನೆ ಕೂದಲು ಬೆಳವಣಿಗೆಗೂ ಸಹಕಾರಿಯಾಗುತ್ತದೆ.
  • ಮೊಸರು, ಮೆಂತ್ಯೆಯ ಮಿಶ್ರಣವನ್ನು ಸೇರಿಸಿ ತಯಾರಿಸಿದ ಮಿಶ್ರಣವನ್ನು ಕೂದಲಿಗೆ ಮಾಸ್ಕ್ ಆಗಿ ಬಳಸಬಹುದು. 20 ನಿಮಿಷಗಳ ನಂತರ ಕೂದಲು ತೊಳೆಯುವುದರಿಂದ ಹೆರಳು ಸೊಂಪಾಗಿ ಬೆಳೆಯುತ್ತದೆ.
  • ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು. ಆಂಟಿಆಕ್ಸಿಡಂಟ್​ಗಳನ್ನು ಹೊಂದಿದ್ದು, ದೇಹದ ಕಾರ್ಯಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮಾತ್ರವಲ್ಲದೆ, ಮಿನರಲ್ಸ್, ಪೈಟೊಆಲ್ಬುಮಿನ್ ಅನ್ನು ಹೊಂದಿದೆ. ಅನೇಕ ದೀರ್ಘಕಾಲಿಕ ರೋಗಗಳನ್ನು ನಿಯಂತ್ರಿಸುವಲ್ಲಿ, ನಿಭಾಯಿಸುವಲ್ಲಿ ಡ್ರ್ಯಾಗನ್ ಫ್ರುಟ್ ನೆರವಾಗುತ್ತದೆ.