ಹುಬ್ಬಳ್ಳಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಸಿಎಂ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ ಇಡೀ ಸಚಿವ ಸಂಪುಟವೇ ಬಂದು ಪ್ರಚಾರ ಮಾಡುತ್ತಿದೆ ಎಂಬುದರಲ್ಲಿ ವಿಶೇಷವೇನೂ ಇಲ್ಲ. ಉಪಚುನಾವಣೆಯಲ್ಲಿ ಇದು ಸಾಮಾನ್ಯ ಕೂಡ. ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಇದನ್ನೇ ಮಾಡುತ್ತಿತ್ತು. ತಮ್ಮ ಪಕ್ಷದ ಅಭ್ಯಥಿರ್ಗಳನ್ನು ಗೆಲ್ಲಿಸಿಕೊಳ್ಳಲು ಎಲ್ಲರೂ ಪ್ರಯತ್ನ ಮಾಡಿಯೇ ಮಾಡುತ್ತಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅಂದಿನ ಸರ್ಕಾರದಿಂದ ಅಕ್ರಮಗಳು ಆಗಿರುವುದು ಕಂಡು ಬಂದಿದೆ. ಈಗ ಅದರ ಬಗ್ಗೆ ವರದಿ ಬಂದಿರುವುದರಿಂದ ಈ ಬಗ್ಗೆ ಚರ್ಚೆ ಆಗುತ್ತಿದೆ. ಚುನಾವಣೆ ಇದೆ ಎಂಬ ಕಾರಣಕ್ಕೆ ಸರ್ಕಾರ ವರದಿ ಹೊರಗೆ ತಂದಿಲ್ಲ ಎಂದು ಸಮರ್ಥಿಸಿಕೊಂಡರು.
ಮುಡಾ ವಿಚಾರದಲ್ಲಿಯೂ ಮುಕ್ತ ಹಾಗೂ ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಯತೀಂದ್ರ ಹೇಳಿದರು.