ನಾಳೆ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಸಹಯೋಗದಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನವನ್ನು 23ರಂದು ಹಮ್ಮಿಕೊಳ್ಳಲಾಗಿದೆ. ಹಿರಿಯ ಸಂಶೋಧಕಿ ಡಾ.ವೈ.ಸಿ.ಭಾನುಮತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ಅಂದು ಬೆಳಗ್ಗೆ 11ಕ್ಕೆ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ‘ಭಾವಾಂತರಾಳ’ ಕೃತಿಯನ್ನು ಬಿಡುಗಡೆಗೊಳಿಸುವರು. ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶಾಸಕರಾದ ತನ್ವೀರ್‌ಸೇಠ್, ಎಲ್.ನಾಗೇಂದ್ರ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಮಹಿಳಾ ಸಾಹಿತ್ಯದ ನೆಲೆ ಹಿನ್ನೆಲೆ, ಮಹಿಳಾ ಸಬಲೀಕರಣ-ಸವಾಲುಗಳು ಕುರಿತು ಗೋಷ್ಠಿಯಲ್ಲಿ ಮಹಿಳಾ ಪರ ಚಿಂತಕರು, ಲೇಖಕಿಯರು ವಿಚಾರ ಮಂಡನೆ ಮಾಡಲಿದ್ದಾರೆ. ಕವಯತ್ರಿ ಪ್ರೊ.ಕೆ.ಆರ್.ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಮಹಿಳಾ ಕವಿಗೋಷ್ಠಿ ನಡೆಯಲಿದ್ದು, ಮೈಸೂರು ವಿವಿಯ ಪ್ರಾಧ್ಯಾಪಕಿ ಪ್ರೊ.ಪ್ರೀತಿ ಶ್ರೀಮಂಧರ್‌ಕುಮಾರ ಸಮ್ಮೇಳನದ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಪ್ರೊ.ಬಿ.ಎಸ್.ರುಕ್ಕಮ್ಮ, ಭಾಗೀರಥಿ ಬಾಯಿ ಕದಂ, ಡಾ.ವಸುಂಧರ ದೊರೆಸ್ವಾಮಿ, ಡಾ.ಕಮಲಾರಾಮನ್, ಮಂಗಳಾ ಸತ್ಯನ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಗುವುದು.

ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಂಗೀತ, ನೃತ್ಯ ಮತ್ತು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 3 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.