More

  ಅನನ್ಯ ಸಾಧಕ, ನಮ್ಮ ನಾಡಿನ ಹೆಮ್ಮೆ ಡಾ.ವಿಜಯ ಸಂಕೇಶ್ವರ

  ಯಶಸ್ಸಿಗೆ ಅಡ್ಡ ದಾರಿಗಳಿಲ್ಲ. ಯಶಸ್ಸು ಪಡೆಯಲು ನಿರಂತರ ಪರಿಶ್ರಮ ಹಾಕಬೇಕು. ಸ್ಪಷ್ಟ ಗುರಿ ಇರಬೇಕು. ಮೇಲಾಗಿ ತನ್ನಲ್ಲಿ ತನಗೆ ಪ್ರಚಂಡ ಆತ್ಮವಿಶ್ವಾಸವಿರಬೇಕು. ಕಷ್ಟಗಳ ಪರಂಪರೆಯನ್ನು ಎದುರಿಸುತ್ತಲೇ ಸಾರಿಗೆ ಕ್ಷೇತ್ರದ ಸಾಮ್ರಾಟನಾಗಿ, ಪತ್ರಿಕೋದ್ಯಮ ಕ್ಷೇತ್ರದ ಮೇರು ಸಾಧಕನಾಗಿ, ಸಾಮಾಜಿಕ ಕಳಕಳಿಯ ಚಿಂತಕನಾಗಿ, ಹಣಕ್ಕಿಂತ ಅಧಿಕ ಸಮಯಕ್ಕೆ ಬೆಲೆ ಕೊಡುವ ವ್ಯಕ್ತಿಯಾಗಿ, ನಿರ್ಭೀತ ರಾಜಕಾರಣಿಯಾಗಿ ಸರ್ವರ ಪ್ರೀತಿ ಗೌರವಗಳಿಗೆ ಪಾತ್ರರಾಗಿರುವ ಡಾ.ವಿಜಯ ಸಂಕೇಶ್ವರರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ನನಗಂತೂ ತುಂಬ ಸಂತೋಷ ತಂದಿದೆ.

  ವಿಜಯ ಸಂಕೇಶ್ವರ ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ಚಿಕ್ಕವರು. ಆದರೆ ಸಾಧನೆಯಲ್ಲಿ ನೂರು ವರ್ಷ ಹಿರಿಯರು. ವಿಜಯ ಸಂಕೇಶ್ವರರನ್ನು ಕಂಡಾಗ ನನಗೆ ಲಿಂಗಾಯತ ಫಂಡ್ (ಇಂದಿನ ಎಲ್.ಇ.ಅಸೋಸಿಯೇಶನ್, ಧಾರವಾಡ) ಹುಟ್ಟುಹಾಕಿದ ರಾವಬಹದ್ದೂರ್ ಅರಟಾಳ ರುದ್ರಗೌಡರು, ಗಿಲಗಂಚಿ ಗುರುಸಿದ್ದಪ್ಪನವರು ನೆನಪಿಗೆ ಬರುತ್ತಾರೆ, ಸಮಾಜ ಸುಶಿಕ್ಷಿತವಾಗಲೆಂದು ತನ್ನ ಇಡೀ ಸಂಸ್ಥಾನವನ್ನು ದಾನಮಾಡಿದ ಶಿರಸಂಗಿ ಲಿಂಗರಾಜರ ಚಿತ್ರ ಕಣ್ಣೆದುರು ಬರುತ್ತದೆ. ‘ವೀರಶೈವ ಸಮಾಜ ಒಳಪಂಗಡಗಳಲ್ಲಿ ಹರಿದುಹಂಚಿ ಹೋಗಬಾರದು; ಅದು ಒಗ್ಗಟ್ಟಾಗಿ ಇರಬೇಕು’ ಎನ್ನುವ ಪ್ರಬಲ ಇಚ್ಛೆ ಹೊಂದಿರುವ ಡಾ.ವಿಜಯ ಸಂಕೇಶ್ವರ ಯುವಕರಿಗೆ ದೊಡ್ಡ ಆದರ್ಶವೆನಿಸಿದ್ದಾರೆ. ಯಾವುದೇ ಕಾಯಕವಿರಲಿ, ಅದರಲ್ಲಿ ಮೇಲುಕೀಳುಗಳಿಲ್ಲ ಎಂಬ ನಂಬಿಕೆಯಿಂದ ಬದುಕಿದವರು ಅವರು. ಪ್ರಿಂಟಿಂಗ್ ಪ್ರೆಸ್ ಇರಲಿ, ಲಾರಿ ಓಡಿಸುವುದಿರಲಿ, ಸಾವಿರ-ಸಾವಿರ ಸಂಖ್ಯೆಯಲ್ಲಿ ಲಾರಿ ಹಾಗೂ ಹೈಟೆಕ್ ಪ್ಯಾಸೆಂಜರ್ ಬಸ್ಸುಗಳ ಮೂಲಕ ಪ್ರಯಾಣಿಕರಿಗೆ ಬೇರೆಡೆ ದೊರೆಯದ ಸೌಲಭ್ಯಗಳನ್ನು ಒದಗಿಸಿ ರಾಷ್ಟ್ರದ ತುಂಬ ವಿಆರ್​ಎಲ್ ಸಂಸ್ಥೆಯನ್ನು ಅನುಪಮವಾಗಿ ಬೆಳೆಸಿದ ಕೀರ್ತಿ ಸಂಕೇಶ್ವರ ಅವರದು. ಸಾರಿಗೆ ಮತ್ತು ಸರಕು ಸಾಗಾಣಿಕೆ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಗಮನಾರ್ಹ. ದೇಶದ ಸಾರಿಗೆ ಕ್ಷೇತ್ರದಲ್ಲಿ ವಿಆರ್​ಎಲ್ ಅತಿದೊಡ್ಡ ಖಾಸಗಿ ಸಾರಿಗೆ ಕಂಪನಿ ಎಂದು ಖ್ಯಾತಿ ಹೊಂದಿದೆ.

  ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳಬಲ್ಲ ಛಾತಿ ಕೆಲವರಿಗೆ ಇರುತ್ತದೆ. ತೀರ ಇತ್ತೀಚೆಗೆ ಹರಿಹರದಲ್ಲಿ ಜರುಗಿದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಸ್ವಾಮೀಜಿ ನಡೆದುಕೊಂಡ ರೀತಿಯನ್ನು ನೇರವಾಗಿ ಖಂಡಿಸಿರುವ ಸಂಕೇಶ್ವರ ಓರ್ವ ಖಂಡಿತವಾದಿ.

  ಜೀವನಶಿಸ್ತು, ಸಮಯಪ್ರಜ್ಞೆಗಳಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಸಂಪಾದಿಸಿದ್ದಾರೆ. ಅದರಲ್ಲಿಯೂ ಈ ಹಿಂದೆ ವಿಜಯ ಕರ್ನಾಟಕ ಹಾಗೂ ಪ್ರಸ್ತುತ ವಿಜಯವಾಣಿಯನ್ನು ನಂಬರ್ 1 ಪತ್ರಿಕೆಗಳಾಗಿ ರೂಪಿಸಿದ ಅವರು ಒಂದು ಪತ್ರಿಕೆಗೆ ಸರಾಸರಿ 6 ರೂ. ವೆಚ್ಚವಾಗುತ್ತಿದ್ದ ದಿನಗಳಲ್ಲಿ 1 ರೂಪಾಯಿಗೆ ಮಾರಿ, ಹಾನಿ ಅನುಭವಿಸಿಯೂ ವಾಚಕರ ಸಂಖ್ಯೆಯನ್ನು ಊಹಿಸಲಾಗದ ರೀತಿಯಲ್ಲಿ ಬೆಳೆಸಿದರು. ದಿಗ್ವಿಜಯ ಟಿವಿ ವಾಹಿನಿಯನ್ನು ಅದ್ಭುತವಾಗಿ ಬೆಳೆಸುತ್ತಿದ್ದಾರೆ.

  ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿ, ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ಹಾಗೂ ಧಾರವಾಡಕ್ಕೆ ಹೈಕೋರ್ಟ್ ಪೀಠ ಬರುವಲ್ಲಿ ಮೌಲಿಕ ಕೊಡುಗೆ ನೀಡಿದ್ದಾರೆ.

  ವಿಜಯ ಸಂಕೇಶ್ವರ ಗದಗಿನಲ್ಲಿ ಜನಿಸಿದರೂ ಅವರ ಮನೆತನ ಮೂಲತಃ ಬೆಳಗಾವಿ ಜಿಲ್ಲೆಯ ಯಮಕನಮರಡಿಯದು. ಗದಗಿನಲ್ಲಿ ಪ್ರಿಂಟಿಂಗ್ ಪ್ರೆಸ್ಸಿನ ಟ್ರೆಡಲ್ ತುಳಿಯುತ್ತಲೇ ಬಡತನಕ್ಕೆ ಸವಾಲು ಒಡ್ಡಿದವರು. ಬಡತನದಲ್ಲಿ ಹುಟ್ಟಿದರೂ ಬಡತನ ಅವರಿಗೆ ಶಾಪವಾಗಲಿಲ್ಲ. ಅದನ್ನೇ ವರವನ್ನಾಗಿಸಿಕೊಂಡು ತಮ್ಮ ಏಳ್ಗೆಗೆ ತಾವೇ ಶಿಲ್ಪಿಯಾದರು.

  ಅವರ ಸಾಧನೆಗಳನ್ನು ಕಂಡು ಮೆಚ್ಚಿಕೊಂಡ ಜನತೆ, ಸಂಘಸಂಸ್ಥೆಗಳು, ಸರ್ಕಾರ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕೇಂದ್ರ ಸರ್ಕಾರ ಈ ವರ್ಷ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಇದು ನಮ್ಮೆಲ್ಲರಿಗೆ ಅಪಾರ ಹರ್ಷ ತಂದಿದೆ. ವೈಯಕ್ತಿವಾಗಿಯೂ ವಿಜಯ ಸಂಕೇಶ್ವರ ನನಗೆ ತುಂಬ ನೆರವಾದವರು. ಮೌಲಿಕವಾದ ಸಲಹೆಗಳನ್ನು ನೀಡಿದವರು. ಸಮಾಜಮುಖಿಯಾಗಿ ಕೆಲಸ ಮಾಡಲು ಪ್ರೇರಣೆ ನೀಡಿದವರು. ಕೆಎಲ್​ಇ ಸಂಸ್ಥೆಯ ಬೆಳೆವಣಿಗೆಯಲ್ಲಿಯೂ ಮಾರ್ಗದರ್ಶನ ಮಾಡುತ್ತಿರುವವರು.

  ಚಿಕ್ಕೋಡಿ ತಾಲೂಕಿನ ಯಡೂರಿನ ಕಾಡದೇವರಮಠದ ಆವರಣದಲ್ಲಿ ಜ.25 ರಂದು ವಿಜಯ ಸಂಕೇಶ್ವರರಿಗೆ ‘ವಿಶ್ವಚೇತನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆ ಸಂದರ್ಭದಲ್ಲಿ ಅವರು ಆಡಿದ ಮಾತುಗಳನ್ನು ವೀರಶೈವ-ಲಿಂಗಾಯತ ಸಮಾಜ ಎಚ್ಚರದಿಂದ ಗಮನಿಸಬೇಕಾಗಿದೆ. ಅನಾರೋಗ್ಯದಿಂದ ಬಳಲುವ, ಆಲಸ್ಯವಿರುವ, ಬುದ್ಧಿಮಾಂದ್ಯವಿರುವ ಮಠಾಧೀಶರನ್ನು ಬದಲಾಯಿಸಿ ಕ್ರಿಯಾಶೀಲ, ವಿದ್ಯಾವಂತ, ಸಮರ್ಥ, ತೀಕ್ಷ್ಣಮತಿಯ ಮಠಾಧೀಶರನ್ನು ಪೀಠಕ್ಕೆ ತರಲು ಹೇಳಿರುವುದು ಸಕಾಲಿಕ ಎಚ್ಚರಿಕೆಯ ಗಂಟೆಯಾಗಿದೆ. ‘ಲಿಂಗಾಯತರ ಆಚರಣೆಗಳು ಹಿಂದೂ ಆಚರಣೆಗಳೇ ಆಗಿವೆ. ಆದ್ದರಿಂದ ಲಿಂಗಾಯತರು ಹಿಂದೂಗಳ ಒಂದು ಭಾಗ. ಹಾಗೆಯೇ ಜೈನರು ತಮ್ಮ ವೈಶಿಷ್ಟ್ಯ ಕಾಯ್ದುಕೊಂಡು ಹಿಂದೂ ಧರ್ಮದ ಭಾಗವಾಗಲಿ’ ಎಂದು ಆಶಿಸಿರುವುದು ಆಲೋಚಿಸಬೇಕಾದ ಗಂಭೀರ ವಿಷಯವಾಗಿದೆ.

  ಹೀಗೆ ತನ್ನ ಸಮಾಜ, ರಾಜ್ಯ ಸರ್ಕಾರ ಇಲ್ಲವೇ ಕೇಂದ್ರ ಸರ್ಕಾರ ದಾರಿ ತಪ್ಪಿದಾಗ ಮಾತಿನ ಚಾಟಿಏಟು ಕೊಡುವಷ್ಟು ಪ್ರಾಮಾಣಿಕ ಹಾಗೂ ನೀತಿವಂತ ಉದ್ದಿಮೆದಾರರು ನಮ್ಮ ದೇಶದಲ್ಲಿ ಎಷ್ಟು ಜನ ಸಿಗುತ್ತಾರೆ ಹೇಳಿ? ವಿಜಯ ಸಂಕೇಶ್ವರ ನಮ್ಮ ನಾಡಿನ ಹೆಮ್ಮೆ, ನಮ್ಮ ಸಮಾಜಕ್ಕೆ ಭೂಷಣ. ಅವರ ತಾಯಿ-ತಂದೆ, ಪತಿಯ ನೆರಳಾಗಿ ಕಷ್ಟಗಳನ್ನು ಸಹಿಸಿಕೊಂಡು ಸಹಕರಿಸಿದ ಪತ್ನಿ ಲಲಿತಮ್ಮ, ತಂದೆಗಿಂತಲೂ ಒಂದು ಕೈಮಿಗಿಲೆನ್ನುವಂತೆ ಬೆಳೆದುನಿಂತಿರುವ ಪುತ್ರ ಆನಂದ ಸಂಕೇಶ್ವರ ಇವರೆಲ್ಲರೂ ಈ ಸಂದರ್ಭದಲ್ಲಿ ಅಭಿನಂದನೆಗಳಿಗೆ ಪಾತ್ರರಾಗುತ್ತಾರೆ. ಪದ್ಮಶ್ರೀ ವಿಜಯ ಸಂಕೇಶ್ವರ ಅವರ ಮುಂದಿನ ಬದುಕು ಆರೋಗ್ಯ ಹಾಗೂ ಸಂತಸಗಳಿಂದ ತುಂಬಿರಲಿ, ಸಮಾಜಕ್ಕೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ.

  (ಲೇಖಕರು ರಾಜ್ಯಸಭೆ ಸದಸ್ಯರು ಹಾಗೂ ಬೆಳಗಾವಿ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts