ಡಾ. ವೀರೇಂದ್ರ ಹೆಗ್ಗಡೆ ಭೇಟಿ ನಾಳೆ

ವಿಜಯವಾಣಿ ಸುದ್ದಿಜಾಲ ಹಾವೇರಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಚಿಸಿರುವ 5,555 ಸ್ವಸಹಾಯ ಸಂಘಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಗೌರವಾಧ್ಯಕ್ಷ ಮರುಗೆಪ್ಪ ಶೆಟ್ಟರ್ ತಿಳಿಸಿದರು.

ನಗರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 27ರಂದು ಬೆಳಗ್ಗೆ 10ಕ್ಕೆ ಬ್ಯಾಡಗಿ ತಾಲೂಕು ಕಾಗಿನೆಲೆಯ ಕನಕ ಕಲಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಪೌರಕಾರ್ವಿುಕರ ಸನ್ಮಾನ ಹಾಗೂ ಜನಮಂಗಲ ಕಾರ್ಯಕ್ರಮದಡಿ ಅಂಗವಿಕಲ ಫಲಾನುಭವಿಗಳಿಗೆ ಸಲಕರಣೆಗಳ ವಿತರಣೆ, ರಾಜ್ಯಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ.

ಡಾ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸುವರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸುವರು ಎಂದರು.

ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ರಾಜ್ಯಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಸದಸ್ಯರಿಗೆ ದಾಖಲಾತಿಯನ್ನು ಐಡಿಬಿಐ ಬ್ಯಾಂಕ್​ನ ಪ್ರಾದೇಶಿಕ ವ್ಯವಸ್ಥಾಪಕ ವಿ. ವಾಸುದೇವನ್ ಹಸ್ತಾಂತರಿಸುವರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ ಹೊನ್ನವಳ್ಳಿ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟಿ ಶುಭಾಶಂಸನೆ ನೆರವೇರಿಸುವರು. ಕಾಗಿನೆಲೆ ಗ್ರಾಪಂ ಅಧ್ಯಕ್ಷೆ ಹೈಯಾತ್​ಬಿ ಮತ್ತಿಹಳ್ಳಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಪುರಸಭೆ ಮುಖ್ಯಾಧಿಕಾರಿ ವಿರೂಪಾಕ್ಷ ಪೂಜಾರ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮುತ್ತಣ್ಣ ಯಲಿಗಾರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಸ್ವಾಗತ ಸಮಿತಿ ಅಧ್ಯಕ್ಷೆ ವನಿತಾ ಗುತ್ತಲ ಮಾತನಾಡಿ, ಧರ್ಮಸ್ಥಳದ ಧರ್ವಧಿಕಾರಿಗಳು ನಮ್ಮ ಜಿಲ್ಲೆಗೆ ಆಗಮಿಸುತ್ತಿರುವುದು ಸಂತಸವಾಗಿದೆ. ಹಾವೇರಿಯಿಂದ ಕಾಗಿನೆಲೆಗೆ ಆಗಮಿಸುವ ಸಮಯದಲ್ಲಿ ಮಾರ್ಗದುದ್ದಕ್ಕೂ ಬರುವ ಹಳ್ಳಿಗಳಲ್ಲಿ ಗ್ರಾಮಸ್ಥರು ರಸ್ತೆಗಳಲ್ಲಿ ರಂಗೋಲಿ ಹಾಕಿ ವಿಶೇಷ ರೀತಿಯಲ್ಲಿ ಸ್ವಾಗತಿಸಲಾಗುವುದು. ಕಾಗಿನೆಲೆಯ ದ್ವಾರದಿಂದ ಅಲಂಕೃತ ಸಾರೋಟದಲ್ಲಿ ಸಕಲ ವಾದ್ಯ, ಕುಂಭಮೇಳದೊಂದಿಗೆ ಮೆರವಣಿಗೆ ಮೂಲಕ ಕನಕ ಕಲಾಭವನಕ್ಕೆ ಕರೆದೊಯ್ಯಲಾಗುವುದು ಎಂದರು.

ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಿ. ನಾರಾಯಣ ಮಾತನಾಡಿ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳು ಬರಲಿದ್ದು, ಈ ಜಿಲ್ಲೆಗಳಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5,555 ಸ್ವಸಹಾಯ ಸಂಘಗಳು ಆರಂಭಗೊಂಡಿವೆ. ಅವುಗಳ ಉದ್ಘಾಟನೆ ಜೊತೆಗೆ 200 ಅಂಗವಿಕಲರಿಗೆ ಸಲಕರಣೆಗಳನ್ನು ವಿತರಿಸಲಾಗುವುದು ಎಂದರು.

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಮೋಹನ ಮೆಣಸಿನಕಾಯಿ, ಸದಸ್ಯರಾದ ಪ್ರಕಾಶ ಶೆಟ್ಟಿ, ಎಸ್.ಎ. ವಜ್ರಕುಮಾರ, ನಾಗೇಂದ್ರ ಕಡಕೋಳ, ನಿತ್ಯಾನಂದ ಕುಂದಾಪುರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *