ಮಹಿಳಾ ಸಾಹಿತ್ಯ ಸಮ್ಮೇಳನ ಮಾ.2ರಿಂದ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್​ನಿಂದ ಮಾ.2 ಮತ್ತು 3ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ನಗರದಲ್ಲಿ ಮೊದಲ ಬಾರಿ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ವಹಿಸುವರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನುಬಳಿಗಾರ್ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ-ಮಹಿಳಾ ನೋಟ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ, ಮಹಿಳೆ ಮತ್ತು ಚಳವಳಿ ಹಾಗೂ ಕವಿಗೋಷ್ಠಿಗಳು ನಡೆಯಲಿವೆ.

ಮಾ.2ರಂದು ಮಧ್ಯಾಹ್ನ 2ರಿಂದ ಆರಂಭವಾಗುವ ‘ಕನ್ನಡ ಸಾಹಿತ್ಯ ಮತ್ತು ಮಹಿಳಾ ನೋಟ’ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ವೈ.ಸಿ. ಭಾನುಮತಿ ವಹಿಸುವರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಪ್ರತಿನಿಧೀಕರಣ ಕುರಿತು ಡಾ. ರಾಜೇಶ್ವರಿ ಮಹೇಶ್ವರಯ್ಯ, ಮಹಿಳೆಯ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಬಗ್ಗೆ ಡಾ. ಎಚ್.ಎಲ್. ಪುಷ್ಪಾ, ಜನಪದ ಮತ್ತು ಶಾಸನಗಳಲ್ಲಿ ಮಹಿಳೆಯರ ಚಿತ್ರಣ ಕುರಿತು ಡಾ. ಎನ್.ಕೆ. ಲೋಲಾಕ್ಷಿ ಮಾತನಾಡುವರು.

ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಮಹಿಳೆ ಮತ್ತು ಚಳವಳಿ ಕುರಿತ 4ನೇ ಗೋಷ್ಠಿಯ ಅಧ್ಯಕ್ಷತೆಯನ್ನು ರಾಧಾ ಸುಂದರೇಶ್ ವಹಿಸುವರು. ಅಸ್ಮಿತೆಗಾಗಿ ಮಹಿಳಾ ಹೋರಾಟ ಕುರಿತು ಡಾ. ಎಲ್.ಜಿ. ಮೀರಾ, ಮಹಿಳಾ ಸಾಹಿತ್ಯ ಸೈದ್ಧಾಂತಿಕ ಚಳವಳಿಗಳ ಪ್ರಭಾವ ಕುರಿತು ಡಾ. ಎನ್.ಗಾಯತ್ರಿ, ಸ್ವಾತಂತ್ರೋತ್ತರ ಚಳವಳಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಡಾ. ಲತಾ ಗುತ್ತಿ ವಿಷಯ ಮಂಡಿಸುವರು.

ಮಧ್ಯಾಹ್ನ 2.30ಕ್ಕೆ ಸವಿತಾ ನಾಗಭೂಷಣ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಲತಾ ರಾಜಶೇಖರ್ ಆಶಯ ಭಾಷಣ ಮಾಡುವರು. ಸಂಜೆ 4.30ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮನು ಬಳಿಗಾರ್ ವಹಿಸುವರು. ಸರ್ವಾಧ್ಯಕ್ಷೆ ಸುಧಾಮೂರ್ತಿ ಭಾಗವಹಿಸುವರು.

ಸಮ್ಮೇಳನ ಆರಂಭವಾಗುವ ಫೆ.2ರಂದು ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಎಂ.ಜಿ.ರಸ್ತೆಯ ಗಣಪತಿ ದೇವಸ್ಥಾನದಿಂದ ಹೊರಟು ಅಂಚೆ ಕಚೇರಿ ರಸ್ತೆ ಮೂಲಕ ಕುವೆಂಪು ಕಲಾಮಂದಿರ ತಲುಪುವುದು.

ಸರ್ವಾಧ್ಯಕ್ಷರೊಂದಿಗೆ ಸಂವಾದ

ಸಮ್ಮೇಳನದ ಎರಡನೇ ದಿನ ಮಾ.3ರಂದು ಬೆಳಗ್ಗೆ 10 ಗಂಟೆಗೆ ಎರಡನೆಯ ಗೋಷ್ಠಿ ಆರಂಭವಾಗಲಿದೆ. ಆಗ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. ಅದನ್ನು ನಿರ್ಮಲಾ ಎಲಿಗಾರ್ ನಿರ್ವಹಿಸುವರು. ‘ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ’ ಕುರಿತ 3ನೇ ಗೋಷ್ಠಿಯಲ್ಲಿ ಡಾ. ಧರಣಿದೇವಿ ಮಾಲಗತ್ತಿ ಅಧ್ಯಕ್ಷತೆ ವಹಿಸುವರು. ಮಹಿಳೆ ಮತ್ತು ಮಾಧ್ಯಮ ಕುರಿತು ಎಚ್.ಎನ್.ಆರತಿ, ಮಹಿಳೆ ಮತ್ತು ಕಲೆ ಕುರಿತು ಪ್ರೊ. ಎಂ.ಜೆ.ಕಮಲಾಕ್ಷಿ, ಮಹಿಳೆ ರಾಜಕೀಯ ಮತ್ತು ಶಿಕ್ಷಣ ಕುರಿತು ಡಾ. ಕೆ.ಷರೀಫಾ ಮಾತನಾಡುವರು.