ರುದ್ರಾಕ್ಷಿ ಕಿರೀಟ ಧರಿಸಿ ಶೂನ್ಯಪೀಠಾರೋಹಣ ನೆರವೇರಿಸಿದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು: ಪರಂಪರೆ ಬದಲಿಸಿದ ಶರಣರು

ಚಿತ್ರದುರ್ಗ : ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸಿ, ವಚನ ಗ್ರಂಥ ಹಿಡಿದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಬುಧವಾರ ಮಠದ ರಾಜಾಂಗಣದಲ್ಲಿ ಶೂನ್ಯಪೀಠಾರೋಹಣ ಮಾಡಿದರು.


ಹಿಂದಿನ ಜಗದ್ಗುರುಗಳು ಬಂಗಾರದ ಕಿರೀಟ ಹಾಗೂ ಬಂಗಾರದ ಪಾದುಕೆ ಧರಿಸಿ ಪೀಠಾರೋಹಣ ಮಾಡುತ್ತಿದ್ದರು. ಆದರೆ ಶರಣರು ಪೀಠಾಧ್ಯಕ್ಷರಾದ ಬಳಿಕ ಪರಂಪರೆ ಬದಲಿಸಿದ್ದಾರೆ.


ಚಿನ್ನದ ಕಿರೀಟ ಮೊದಲಾದ ಆಭರಣಗಳೊಂದಿಗೆ ಮುರುಘಾ ಶರಣರು ಆಗಮಿಸಿ, ಮುರುಘಾ ಶಾಂತವೀರ ಸ್ವಾಮಿಗಳ ಗದ್ದುಗೆಗೆ ನಮಿಸಿದರು. ಬಳಿಕ ಭಕ್ತರು ನೀಡಿದ ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿ ಹಿಡಿದು ಪೀಠಾರೋಹಣ ಮಾಡಿದರು. ಈ ವೇಳೆ ಸಾವಿರಾರು ಭಕ್ತರು ಜಯಘೋಷ ಕೂಗಿದರು.


ನಾಡಿನ ಎಲ್ಲೆಡೆಯಿಂದ ಆಗಮಿಸಿದ್ದ ಭಕ್ತರು ಫಲಪುಷ್ಪ ಕಾಣಿಕೆ ಅರ್ಪಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಪೀಠಾರೋಹಣದ ಹಿನ್ನೆಲೆಯಲ್ಲಿ ಮಠದ ರಾಜಾಂಗಣವನ್ನು ಹೂವಿನ ಬೃಹತ್ ಚಿತ್ತಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.


ವಿಶ್ವಗುರು ಬಸವಣ್ಣ, ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.


ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ ಸೇರಿಂದತೆ ಹಲವು ಮಠಾಧೀಶರು, ಮಠದ ಮುಖ್ಯಸ್ಥರು ಹಾಗೂ ಇತರರು ಇದ್ದರು.
 

Leave a Reply

Your email address will not be published. Required fields are marked *