ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು

ತುಮಕೂರು: ಡಾ. ಶಿವಕುಮಾರ ಶ್ರೀಗಳ ಅಪೇಕ್ಷೆಯಂತೆ ಅವರನ್ನು ನಗರದ ಸಿದ್ಧಗಂಗಾ ಆಸ್ಪತ್ರೆಯಿಂದ ಶ್ರೀಮಠಕ್ಕೆ ಬುಧವಾರ ಬೆಳಗಿನ ಜಾವ 3.45ಕ್ಕೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆಯಿಂದ ಹಳೆಯ ಮಠಕ್ಕೆ ಕರೆತಂದ ಬಳಿಕ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಶ್ರೀಗಳು ವಿಶ್ರಾಂತಿ ಪಡೆಯುತ್ತಿರುವ ಕೊಠಡಿ ಕಿಟಕಿಯಿಂದ ಅವರ ದರ್ಶನಕ್ಕೆ ಬೆಳಗ್ಗೆ ಕೆಲ ಹೊತ್ತು ಹಾಗೂ ಸಂಜೆ ಮಠದ ಸಿಬ್ಬಂದಿ, ಭಕ್ತರಿಗೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿ ಸೇರಿ ಗಣ್ಯರು ಶ್ರೀಗಳ ಆರೋಗ್ಯ ವಿಚಾರಿಸಿದರು.

ಕಣ್ಣೀರಿಟ್ಟ ಸಿದ್ದಲಿಂಗ ಶ್ರೀ: ಮಠದ ಮಕ್ಕಳಿಗೆ ಶ್ರೀಗಳ ದರ್ಶನ ಮಾಡಿಸಲು ಸಾಧ್ಯವಾಗುತ್ತಿಲ್ಲವೆಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಸಹಕರಿಸಬೇಕು. ಇಲ್ಲ ಸಲ್ಲದ ವದಂತಿಗೆ ಕಿವಿಗೊಡದಂತೆ ಎಲ್ಲರೂ ಸಹಕರಿಸಬೇಕೆಂದು ಭಾವುಕರಾದರು.

ಶ್ರೀಗಳಿಗೆ ಪುನರಪಿ ಮರಣ ಇಲ್ಲ ಅನಿಸುತ್ತೆ. ಪರಮಾತ್ಮನ ಸಾನ್ನಿಧ್ಯಕ್ಕೆ ಹೋಗುವ ಚೇತನ. 4-5 ಬಾರಿ ಆರೋಗ್ಯ ತೊಂದರೆಯಾದರೂ ಚೇತರಿಸಿಕೊಂಡಿದ್ದಾರೆ. ಈಶ್ವರ ಅವರನ್ನು ಕರೆಯಬೇಕಲ್ಲ. ಆ ಸಮಯದವರೆಗೂ ಚೇತನ ಬೆಳಗಲಿದೆ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

One Reply to “ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು”

  1. We wish to the Shiva Kumar Swamiji, for speedy recovery, and well soon, and also pray in the God to bless the Swamiji for still longer life

Comments are closed.