ಸಿನಿಮಾ

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ನೀಡಿ; ಡಾ.ಸಂಜಯ ಡಾಂಗೆ ಒತ್ತಾಯ

ಹಾವೇರಿ: ಮಾಜಿ ಉಪ ಮುಖ್ಯಮಂತ್ರಿ, ದಲಿತ ಮುಖಂಡ, ಎಸ್‌ಸಿ ಬಲಗೈ ಸಮಾಜಕ್ಕೆ ಸೇರಿರುವ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ.ಸಂಜಯ ಡಾಂಗೆ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿಯಾಗಿರುವ ಪರಮೇಶ್ವರ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ಇವೆ. ಇಂತಹ ಅರ್ಹ ವ್ಯಕ್ತಿಯನ್ನು ಸಿಎಂ ಮಾಡುವ ಮೂಲಕ ಪಕ್ಷದಲ್ಲಿ ಸಾಮಾಜಿಕ ನ್ಯಾವಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಗ್ಯಾರಂಟಿ ಪ್ರಣಾಳಿಕ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಪರಮೇಶ್ವರ ಅದ್ಬುತ ಪ್ರಣಾಳಿಕೆ ನೀಡುವ ಮೂಲಕ ಬಹುಮತ ಪಡೆಯಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಧುಗಿರಿ ಹಾಗೂ ಕೊರಟಗೆರೆಯಿಂದ ಆರು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ರೇಷ್ಮೆ ಸಚಿವರಾಗಿ, ಉನ್ನತ ಶಿಕ್ಷಣ, ವೈದ್ಯಕೀಯ, ಗೃಹ ಸಚಿವರಾಗಿ, ಉಪ ಮುಖ್ಯಮಂತ್ರಿ ಹುದ್ದೆಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ ಎಂದರು.
ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಈ ಹಿಂದೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಸೋಲಿನ ಕಾರಣಕ್ಕೆ ಹಿಂದೆ ಸರಿಯಬೇಕಾಯಿತು. ಪಕ್ಷಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಪರಮೇಶ್ವರ ಅವರ ಸೇವೆ ಗುರುತಿಸಿ ಕಾಂಗ್ರೆಸ್ ವರಿಷ್ಠರು ಸಿಎಂ ಹುದ್ದೆ ಕೊಟ್ಟು ಗೌರವಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಸುರೇಶ ಯಲ್ಲಟ್ಟಿ, ಸತೀಶ ಕಾಟೇನಹಳ್ಳಿ, ಸುರೇಶ ಚಲವಾದಿ, ಶಂಕರ ಇಂಗಳಗಿ, ವಿಜಯ ಚಲವಾದಿ, ರವಿ ಕಾಳೆ, ಕುಮಾರಸ್ವಾಮಿ ಚಲವಾದಿ, ಚಂದ್ರಪ್ಪ ಸನದಿ ಇದ್ದರು.

Latest Posts

ಲೈಫ್‌ಸ್ಟೈಲ್