More

    ಡಾ.ರವಿ ಪಾಟೀಲ ಪರ ಷಾ ಮತಯಾಚನೆ

    ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಗರದಲ್ಲಿ ಶನಿವಾರ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರ ಮತಯಾಚಿಸಿದರು.

    ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಯಾರನ್ನೋ ಶಾಸಕನ್ನಾಗಿ ಹಾಗೂ ಮಂತ್ರಿಯನ್ನಾಗಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಮತಬ್ಯಾಂಕ್ ರಾಜಕಾರಣದ ಹಾಗೂ ಬಜರಂಗ ದಳ ಗೌರವಿಸದ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಿ. ಆ ಮೂಲಕ ಹಿಂದುತ್ವ ರಕ್ಷಣೆಗೆ ಬದ್ಧವಾಗಿರುವ ಬಿಜೆಪಿಯನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

    ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಅವರು ಬೆಳಗಾವಿಯಲ್ಲಿನ ಜನತೆ ಶಾಂತಿ-ಸಹಬಾಳ್ವೆಯ ಜೀವನ ನಡೆಸುವುದರ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಷ್ಟ ಗುರಿ-ಉದ್ದೇಶ ಹೊಂದಿದ್ದು, ಅವರನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

    2024ರಲ್ಲಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ, ಸುಭದ್ರ ಹಾಗೂ ಡಬಲ್ ಇಂಜಿನ್ ಸರ್ಕಾರ ನಡೆಸಲು ಅನುಕೂಲ ಮಾಡಬೇಕು. ಇದೀಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಲ್ಲಿರುವ ತಮ್ಮ ಎಲ್ಲ ಸಂಬಂಧಿಕರೂ ಬಿಜೆಪಿ ಅಭ್ಯರ್ಥಿಗಳಿಗೇ ಮತದಾನ ಮಾಡುವಂತೆ ತಿಳಿಹೇಳಿ ಎಂದರು.

    ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡ ರೋಡ್ ಶೋ ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ ಮಾರ್ಗವಾಗಿ ಸಂಚರಿಸಿತು. ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ರವಿ ಪಾಟೀಲ ಬೆಂಬಲಿಗರು ಬಿಜೆಪಿ ಪರವಾಗಿ ಘೋಷಣೆ ಕೂಗಿದರು. ನಾಯಕರ ಮೇಲೆ ಪುಷ್ಪವೃಷ್ಟಿಗೈದರು.

    ರೋಡ್ ಶೋ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಅಪಾರಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಕೈಬೀಸಿದ ಷಾ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರು. ಒಂದೆಡೆ ಬಿಜೆಪಿ ಬಾವುಟಗಳ ರಾರಾಜಿಸಿದರೆ, ಮತ್ತೊಂದೆಡೆ ಕೇಸರಿ ಪೇಟಾ ತೊಟ್ಟಿದ್ದ ನೂರಾರು ಮಹಿಳೆಯರು ಗಮನಸೆಳೆದರು. ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ ಬೆನಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts