ನವದೆಹಲಿ: ನಾಥೂರಾಮ್ ಗೋಡ್ಸೆ ಅವರಿಗಿಂತ ಮೊದಲೇ ನಾನು ಹುಟ್ಟಿದ್ದರೆ, ನನ್ನ ಕೈಯಿಂದಲೇ ಗಾಂಧೀಜಿಯನ್ನು ಕೊಲ್ಲುತ್ತಿದ್ದೆ ಎಂದು ಅಖಿಲ ಭಾರತೀಯ ಹಿಂದು ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ, ದೇಶದ ಹಿಂದೂ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶೆ ಡಾ.ಪೂಜಾ ಶಕುನ್ ಪಾಂಡೆ ಉತ್ತರ ಪ್ರದೇಶದ ಮೀರತ್ನಲ್ಲಿ ಹೇಳಿಕೆ ನೀಡಿದ್ದು ತನ್ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ಗಾಂಧಿಯನ್ನು ನಾನೇ ಕೊಲ್ಲುತ್ತಿದ್ದೆ ಎಂದು ಹೇಳಿದ್ದಲ್ಲದೆ, ಸ್ವತಂತ್ರ್ಯ ಭಾರತದಲ್ಲಿರುವ ಗಾಂಧಿ ಹಿಂಬಾಲಕರು ಯಾರಾದರೂ ದೇಶ ವಿಭಜನೆಗೆ ಮುಂದಾದರೆ ಅವರನ್ನು ಶೂಟ್ ಮಾಡಲು ಹಿಂಜರಿಯುವುದಿಲ್ಲ. ನಮ್ಮ ಭಾರತ ವಿಭಜನೆಯಾಗಿ ಲಕ್ಷಾಂತರ ಜನರು ಸಾಯಲು ಗಾಂಧೀಜಿಯೇ ಕಾರಣ ಎಂದು ಆರೋಪಿಸಿದ್ದಾರೆ.
ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆಯಲು ಸಾಧ್ಯವಿಲ್ಲ. ಅದು ಹೇಗೆ ಅವರಿಗೆ ಈ ಬಿರುದು ಕೊಟ್ಟರೋ ನನಗೆ ತಿಳಿಯುತ್ತಿಲ್ಲ. ಯಾವ ತಂದೆಯೂ ತಮ್ಮ ಮಕ್ಕಳನ್ನು ಬೇರೆ ಮಾಡುವುದಿಲ್ಲ. ಲಕ್ಷಾಂತರ ಹಿಂದುಗಳ ಸಾವಿಗೆ ಕಾರಣವಾದವರಿಗೆ ರಾಷ್ಟ್ರಪಿತ ನಾಮಧೇಯ ಸೂಕ್ತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಡ್ಸೆ ದೇಶಭಕ್ತ
ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿರುವ ಪೂಜಾ ಪಾಂಡೆ, ಗಾಂಧೀಜಿಯನ್ನು ವೈಭವೀಕರಿಸುತ್ತಿರುವ ಇತಿಹಾಸವನ್ನೇ ಇಂದಿನ ಪೀಳಿಗೆ ಸತ್ಯವೆಂದು ನಂಬಿದೆ. ಈಗಿನ ಬಿಜೆಪಿ ಕೇಂದ್ರ ಸರ್ಕಾರ ಆ ಇತಿಹಾಸವನ್ನು ಬದಲಿಸಬೇಕು. ಗಾಂಧಿ ತತ್ವಶಾಸ್ತ್ರವನ್ನು ಬ್ಯಾನ್ ಮಾಡಬೇಕು ಎಂದು ಹೇಳಿದ್ದು ಈಗ ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ.