ಎಂಎನ್‌ಆರ್‌ಗೆ ಇಂದು ಗೌರವಾರ್ಪಣೆ

< ಐತಿಹಾಸಿಕ ಸಹಕಾರಿ ಕಾರ್ಯಕ್ರಮ * ರಜತ ಸಂಭ್ರಮಕ್ಕೆ ಸಜ್ಜಾದ ನೆಹರು ಮೈದಾನ>

ಮಂಗಳೂರು: ಸಹಕಾರರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ ಸೇವೆಯ ರಜತ ಸಂಭ್ರಮ ಮತ್ತು ನವೋದಯ ಸ್ವ-ಸಹಾಯ ಸಂಘಗಳ ವಿಶಂತಿ ಸಮಾವೇಶಕ್ಕೆ ಮಂಗಳೂರಿನ ನೆಹರು ಮೈದಾನ ಸಜ್ಜಾಗಿದೆ.

ನಗರದ ಮುಖ್ಯರಸ್ತೆ ಮತ್ತು ವೃತ್ತಗಳಲ್ಲಿ ರಾಜೇಂದ್ರಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಫಲಕಗಳು ರಾರಾಜಿಸುತ್ತಿವೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಉತ್ಕೃಷ್ಟ ಸಹಕಾರಿ ಭವನವನ್ನು ವಿದ್ಯುದ್ದೀಪ ಹಾಗೂ ಲೇಸರ್ ಬೆಳಕಿನಿಂದ ಅಲಂಕೃತಗೊಳಿಸಲಾಗಿದೆ.

ಇದೇ ಪ್ರಥಮ ಬಾರಿಗೆ ಪೂರ್ತಿ ನೆಹರು ಮೈದಾನಕ್ಕೆ ಪೆಂಡಾಲ್ ಹಾಕಲಾಗಿದೆ. ನೆಹರು ಮೈದಾನದ ಫುಟ್‌ಬಾಲ್ ಅಂಗಣದಲ್ಲಿ ವಿಶಾಲ ಪ್ರಧಾನ ವೇದಿಕೆ ಹಾಗೂ ಅದರ ಬದಿಗಳಲ್ಲಿ ಎರಡು ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಲಾಗಿದೆ. 2 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದು, ಪೂರ್ತಿ ಮೈದಾನಕ್ಕೆ ಕುರ್ಚಿ ಅಳವಡಿಸಲಾಗಿದೆ.

 ಗಣ್ಯರು ದಂಡು: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ರಜತ ಸಂಭ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಡಾ.ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ್, ಬಂಡೆಪ್ಪ ಕಾಶೆಂಪುರ್, ಯು.ಟಿ.ಖಾದರ್, ಜಯಮಾಲ, ಶಿವಾನಂದ ಪಾಟೀಲ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಸಮವಸ್ತ್ರದಲ್ಲಿ ಭಾಗವಹಿಸುವ ಮೂಲಕ ಸಮಾವೇಶಕ್ಕೆ ಮೆರುಗು ನೀಡಲಿದ್ದಾರೆ.

ಪತ್ರಕರ್ತ ಪಿ.ಬಿ. ಹರೀಶ್ ರೈ ರಚಿಸಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಜೀವನ – ಸಾಧನೆಯ ಕಥನ ‘ಸಹಕಾರಿ ವೀರ ‘ಕೃತಿ ರಜತ ಸಂಭ್ರಮ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ನಡೆದು ಬಂದ ಹಾದಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಾಧನೆ, ಅವಿಭಜಿತ ದ.ಕ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆದು ಬಂದ ವಿವರ ಈ ಕೃತಿಯಲ್ಲಿ ಅಡಕವಾಗಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ‘ವಿಂಶತಿ’ ಸ್ಮರಣ ಸಂಚಿಕೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಭವ್ಯ ಮೆರವಣಿಗೆ: ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಬೆಳಗ್ಗೆ 9.30ಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ನೆಹರು ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. 60ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮಕ್ಕೆ ಬರುವವರಿಗೆ ಸುರತ್ಕಲ್ ಕುಲಾಲ ಭವನ, ಅಡ್ಯಾರ್ ಗಾರ್ಡನ್ ಮತ್ತು ಕೈಕಂಬ ಇಂಡಸ್ಟ್ರಿಯಲ್ ಏರಿಯಾದಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಲಕ್ಷ ಮಂದಿಗೆ ಊಟದ ಪ್ಯಾಕೆಟ್ ವಿತರಣೆಯಾಗಲಿದೆ. ಸ್ವಚ್ಛತೆಗೆ 300 ಕಾರ್ಯಕರ್ತರು, 1000 ಸ್ವಯಂ ಸೇವಕರು ಮತ್ತು 450 ಹೋಮ್‌ಗಾರ್ಡ್‌ಗಳನ್ನು ಕಾರ್ಯಕ್ರಮದ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಸುರಕ್ಷತೆಗಾಗಿ 100 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ 25 ಎಲ್‌ಇಡಿ ಟಿವಿ ಪರದೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿ, ವಿಐಪಿ, ಹಾಗೂ ಸಾರ್ವಜನಿಕರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.