More

    ಗಡಿ ಭಾಗದಲ್ಲಿ ಭಾಷೆ ಅಭಿವೃದ್ಧಿಗೆ ಚಿದಾನಂದಮೂರ್ತಿ ಹೋರಾಟ

    ಕೋಲಾರ: ಸಂಶೋಧನೆ ಮೂಲಕ ಕರ್ನಾಟಕದ ಇತಿಹಾಸ ತೋರಿಸಿಕೊಟ್ಟವರಲ್ಲಿ ಡಾ.ಎಂ.ಚಿದಾನಂದಮೂರ್ತಿ ಅವರು ಅಗ್ರಗಣ್ಯರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

    ನಗರದ ಕಸಾಪ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚಿಮೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಚಿದಾನಂದಮೂರ್ತಿ ಅವರಿಗೂ ಕೋಲಾರಕ್ಕೆ ಅಪಾರ ನಂಟಿದೆ. ಹಿಂದೆ ಕೆಜಿಎಫ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಗಡಿ ಭಾಗದಲ್ಲಿ ಭಾಷೆ, ಸಾಹಿತ್ಯ ಅಭಿವೃದ್ಧಿ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು.

    ಕವಿ ಡಾ.ಶರಣಪ್ಪ ಗಬ್ಬೂರ್ ಮಾತನಾಡಿ, ಚಿದಾನಂದ ಮೂರ್ತಿ ಅವರು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ವಿಶಾಲ ಮನೋಭಾವನೆ, ರಾಷ್ಟ್ರೀಯತೆಯ ಚಿಂತನೆ, ಪರಿಕಲ್ಪನೆಯನ್ನು ಹೊಂದಿದ್ದರು. ಕನ್ನಡದ ಬಗ್ಗೆ ಎಂದೂ ಆಲಸ್ಯವನ್ನು ಒಪ್ಪಿಕೊಂಡಿರಲಿಲ್ಲ. ನಾಲ್ಕು ದಶಕಗಳ ಕಾಲ ಕನ್ನಡಕ್ಕಾಗಿ ಹೋರಾಟ ಮಾಡಿ ಚಳವಳಿ ಕಟ್ಟಿದವರು. ಏಕೀಕರಣ, ಗೋಕಾಕ್ ಚಳವಳಿಗೆ ಶಕ್ತಿ ತುಂಬಿದ್ದರು. ಷಟ್ಪದಿ ಕಾವ್ಯವನ್ನು ಶಾಸನಗಳಲ್ಲಿ ಮೊದಲು ತಿಳಿಸಿಕೊಟ್ಟವರು ಎಂದು ಸ್ಮರಿಸಿದರು.

    ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ, ಹಂಪಿಯಲ್ಲಿ ಕನ್ನಡ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕೆಂದು ಹೋರಾಟ ಹಾಗೂ ಗೋಕಾಕ್ ಚಳವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು, ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ವ್ಯಕ್ತಿತ್ವ, ಸಾಹಿತ್ಯ ನಮ್ಮೊಂದಿಗಿರುತ್ತದೆ. ಅವುಗಳ ಅಧ್ಯಯನದ ಮೂಲಕ ಅವರನ್ನು ಜೀವಂತವಾಗಿರಿಸೋಣ ಎಂದು ನುಡಿದರು.
    ಬಿಇಒ ಸಿ.ಆರ್. ಅಶೋಕ್ ಮಾತನಾಡಿ, ಮಕ್ಕಳಿಂದ ಹಿರಿಯರಾದಿಯಾಗಿ ಎಲ್ಲರೂ ಮೆಚ್ಚುವಂತಹ ಸಾಹಿತ್ಯ ರಚಿಸಿದ್ದಾರೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು.

    ಕನ್ನಡಪರ ಹೋರಾಟಗಾರ ಆ.ಕೃ.ಸೋಮಶೇಖರ್ ಮಾತನಾಡಿ, ಗೋಕಾಕ್ ಚಳವಳಿಯಲ್ಲಿ ಚಿಮೂ ಜತೆ ಭಾಗಿಯಾಗಿದ್ದಲ್ಲದೆ ಕೋಲಾರಕ್ಕೆ 8 ಬಾರಿ ಕರೆಸಿಕೊಂಡಿದ್ದೆವು. ಎರಡು ಬಾರಿ ಸನ್ಮಾನಿಸಿದ್ದೆವು ಎಂದು ಸ್ಮರಿಸಿದರು.

    ಸಿರಿ ಗನ್ನಡ ವೇದಿಕೆ ಅಧ್ಯಕ್ಷ ಡಾ.ಕೆ.ಎಂ.ಜೆ.ಮೌನಿ, ಕಸಾಪ ಗೌರವ ಕಾರ್ಯದರ್ಶಿ ಆರ್. ಅಶ್ವತ್ಥ್, ಕಾರ್ಯಕಾರಿ ಸಮಿತಿ ಸದಸ್ಯೆ ಕೋಮುಲ ಸುಮಿತ್ರಕುಮಾರಿ, ನಗರಾಧ್ಯಕ್ಷ ಬಿ.ಶಿವಕುಮಾರ್, ಗೌರವ ಕಾರ್ಯದರ್ಶಿ ವಿ. ಮುರಳಿಮೋಹನ್, ನಿವೃತ್ತ ಶಿಕ್ಷಕರಾದ ಸುಲೇಮಾನ್‌ಖಾನ್, ಸುಬ್ಬರಾಮಯ್ಯ, ಕಲಾವಿದ ವಿಷ್ಣು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts