ಸಿಂದಗಿ: ಜಾನಪದ ಪ್ರಕಾರದ ಹಿರಿಮೆಯನ್ನು ಬಿತ್ತಿದ ಲಾವಣಿಗಳ ಕುರಿತು ಡಾ.ಸಂಗಮೇಶ ಬಿರಾದಾರ ಅವರು ನಡೆಸಿದ ಅಧ್ಯಯನ ಮತ್ತು ಸಂಶೋಧನೆಯ ಸಾಹಿತ್ಯ ವಿಶ್ವ ವಿದ್ಯಾಲಯಗಳಲ್ಲಿನ ಸರ್ಟಿಫಿಕೇಟ್ ಕೋರ್ಸ್‌ಗೆ ಮಾನ್ಯತೆ ಪಡೆಯುವಷ್ಟು ಅಧಿಕೃತವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಬಿ.ಹೂಗಾರ ಹೇಳಿದರು.
ಪಟ್ಟಣದ ಸಾರಂಗಮಠದ ಸಭಾ ಭವನದಲ್ಲಿ ಸಿಂದಗಿಯ ನೆಲೆ ಪ್ರಕಾಶನದ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಾಡಿನ ಜಾನಪದ ವಿದ್ವಾಂಸರಿಗೆ ಕೊಡಮಾಡುವ ದೇಸಿ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಡಾ.ಸಂಗಮೇಶ ಬಿರಾದಾರ ಅವರ ಬದುಕು-ಬರಹ ಕೃತಿಯ ಲೇಖಕರಾಗಿ ಭಾನುವಾರ ಅವರು ಮಾತನಾಡಿದರು.
ಭಾಷೆ, ವ್ಯಾಕರಣದಲ್ಲಿ ಬಿರಾದಾರ ಅವರದು ವಿಶಾಲವಾದ ಛಾಪು ಇದೆ. 25ಕ್ಕೂ ಹೆಚ್ಚು ಕೃತಿ ಮತ್ತು 15 ಸಂಪಾದನಾ ಕೃತಿಗಳನ್ನು ಹೊರ ತಂದಿದ್ದಾರೆ. ಮೂಲ ಲಾವಣಿಯ ಭಾಷೆ ಕನ್ನಡವೆಂದು ಸಾಬೀತುಪಡಿಸಿದ ಡಾ.ಸಂಗಮೇಶ ಬಿರಾದಾರ ಅವರಿಗೆ ದೇಸಿ ಸನ್ಮಾನ ದೊರೆತಿರುವುದು ಗೌರವದ ಕಾರ್ಯ ಎಂದರು.
ಹಿರಿಯ ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಾನಪದ ವಿವಿಧ ಪ್ರಕಾರಗಳಲ್ಲಿ ಹರಡಿ ಹಬ್ಬಿ ನಿಂತಿದೆ. ಸ್ವಾತಂತ್ರೃ ಪೂರ್ವದ ಕಾಲದಲ್ಲಿ ಲಾವಣಿಗಳ ಮೂಲಕ ಸಂದೇಶ ಮತ್ತು ಸಮಾಚಾರಗಳನ್ನು ಪ್ರಸ್ತುತಪಡಿಸಲಾಗುತ್ತಿತ್ತು ಎಂದು ಹೇಳಿದರು.
ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ.ಚೆನ್ನಪ್ಪ ಕಟ್ಟಿ ಮಾತನಾಡಿ, ನಾಲ್ಕು ದಶಕಗಳ ದೀರ್ಘ ಅವಧಿಯಲ್ಲಿ ಪುಸ್ತಕ ಪ್ರಕಟಣೆಯನ್ನೇ ಗುರಿಯಾಗಿಟ್ಟುಕೊಂಡು ಸಾಗುತ್ತಿರುವ ನೆಲೆ ಪ್ರಕಾಶನ 70ಕ್ಕೂ ಹೆಚ್ಚು ಕೃತಿ, ಕವನಗಳ ಪ್ರಕಟಣೆ ಮೂಲಕ ಕ್ರಿಯಾಶೀಲತೆ ಹೆಚ್ಚಿಸಿಕೊಂಡಿದೆ. ನಾಡಿನ ಮೂವರು ಜಾನಪದ ವಿದ್ವಾಂಸರಿಗೆ ದೇಸಿ ಸನ್ಮಾನ ಮಾಡಿ ಗೌರವಿಸಿದ್ದು, ಡಾ.ಬಿರಾದಾರ ಅವರು ನಾಲ್ಕನೆಯವರಾಗಿದ್ದಾರೆ ಎಂದರು.
ಅಕ್ಲೆಂಡ್‌ನ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಮಾತನಾಡಿದರು.
ಡಾ.ಎಂ.ಬಿ.ಹೂಗಾರ ಅವರು ಬರೆದ ದೇಸಿ ಸನ್ಮಾನ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರ ಬದುಕು-ಬರಹ ಕೃತಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಬಿಡುಗಡೆಗೊಳಿಸಿದರು.
ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಡಾ.ಎಂ.ಎಂ.ಪಡಶೆಟ್ಟಿ, ಹ.ಮ.ಪೂಜಾರ, ಜೆ.ಜಿ.ಜೋಶಿ, ಪ್ರೊ.ಶಾಂತು ಹಿರೇಮಠ, ಎಂ.ಎಸ್.ಹಯ್ಯಳಕರ, ಗುಂಡಪ್ಪ ಪಡಗಾನೂರ, ಜಿ.ಎಸ್.ಹಣಮಶೆಟ್ಟಿ, ಡಾ.ಶ್ರೀಶೈಲ ನಾಗರಾಳ, ದೇವು ಮಾಕೊಂಡ, ಗುರುರಾಜ ಪಡಶೆಟ್ಟಿ ಇತರರಿದ್ದರು.