ಹನಗೋಡು: ಹನಗೋಡಿನ ಸರ್ಕಾರಿ ಆಸ್ಪತ್ರೆ ವೈದ್ಯರಾಗಿದ್ದ ಡಾ.ಜೋಗೇಂದ್ರನಾಥ್ ಅವರ ಸೇವೆ ಅನನ್ಯ. ತಾವು ಗಳಿಸಿದ ಪ್ರೀತಿಯ ಊರಿನಲ್ಲೇ ಆಸ್ಪತ್ರೆ ನಿರ್ಮಿಸಿ ಜನರಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಪ್ರಶಂಸನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ತಾಲೂಕಿನ ಹನಗೋಡಿನಲ್ಲಿ ನಿರ್ಮಿಸಿರುವ ಎನ್.ಜೆ.ಎಂ. ಆಸ್ಪತ್ರೆಯನ್ನು ಸಂಗೀತ ನಿರ್ದೇಶಕ ಡಾ.ಹಂಸಲೇಖ, ಮಾಜಿ ಶಾಸಕ ಎಚ್.ಪಿ.ಮಂಜುನಾಥ ಅವರೊಂದಿಗೆ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಜೋಗೇಂದ್ರನಾಥ್ 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಈ ಭಾಗದಲ್ಲಿ ಅತ್ಯಂತ ಜನಾನುರಾಗಿದ್ದು, ನಿವೃತ್ತಿ ಹೊಂದಿದ ನಂತರ ಇದೇ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಇವರ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು. ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಡಾ.ಜೋಗೇಂದ್ರನಾಥ್ ಅವರು 30 ವರ್ಷಗಳ ಹಿಂದೆ ಆರೋಗ್ಯ ಸಚಿವನಾಗಿದ್ದ ವೇಳೆ ಹನಗೋಡು ಆಸ್ಪತ್ರೆ ವೈದ್ಯಾಧಿಕಾರಿಯಾಗಿ ನೇಮಕವಾಗಿ ಇಲ್ಲಿಯೇ ನಿವೃತ್ತಿ ಹೊಂದಿರುವುದು ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಭವ್ಯವಾದ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರು ತಾಲೂಕಿನ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ವಾರ್ಡ್ ವಿಭಾಗ ಉದ್ಘಾಟಿಸಿದ ಸಂಗೀತ ನಿರ್ದೇಶಕ ಡಾ.ಹಂಸಲೇಖ ಮಾತನಾಡಿ, ನಾಗರಹೊಳೆ ಉದ್ಯಾನದಂಚಿನ ಹನಗೋಡು ಸುತ್ತಮುತ್ತಲ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ನಿಟ್ಟಿನಲ್ಲಿ ಡಾ.ಜೋಗೇಂದ್ರನಾಥ್ ಆಸ್ಪತ್ರೆ ನಿರ್ಮಿಸಿರುವ ಅವರ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಸ್ತ್ರಚಿಕಿತ್ಸಾ ಕೊಠಡಿ ಉದ್ಘಾಟಿಸಿದ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಕ್ರಿಯಾಶೀಲ, ಬದ್ಧತೆಯ ಕಾರ್ಯನಿರ್ವಹಣೆಯಿಂದ ಜನಪ್ರಿಯರಾಗಿರುವ ಡಾ.ಜೋಗೇಂದ್ರನಾಥ್ ಅವರ ಸೇವೆ ಅನುಪಮವಾದದು ಎಂದು ಹೇಳಿದರು.
ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಜೋಗೇಂದ್ರನಾಥ್ ಮಾತನಾಡಿ, 30 ವರ್ಷಗಳ ಸೇವೆಯಿಂದ ಇಲ್ಲಿನ ಜನರ ಪ್ರೀತಿ ಗಳಿಸಿದ್ದೇನೆ ಎಂಬ ಹೆಮ್ಮೆ ಇದೆ. ಉಸಿರು ಕೊಟ್ಟ ಊರು ನನ್ನದಾದರೆ, ಬದುಕು ಕೊಟ್ಟಿದ್ದು ನನ್ನ ಪ್ರೀತಿಯ ಹನಗೋಡು ಎಂದು ಬಣ್ಣಿಸಿದರು. ಈ ಭಾಗದ ಜನರ ಆರೋಗ್ಯ ಸೇವೆಗಾಗಿ ನನ್ನ ಜೀವನ ಮುಡಿಪಾಗಿಡುವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೃದಯ ತಜ್ಞ ಡಾ.ಎಸ್.ಶಿವಸ್ವಾಮಿ ಸೋಸಲೆ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಹಂಪಿ ವಿ.ವಿ.ಯ ಪ್ರೊ.ಚಿನ್ನಸ್ವಾಮಿ ಸೋಸಲೆ ಶುಭಹಾರೈಸಿದರು.
ತಹಸೀಲ್ದಾರ್ ಜೆ.ಮಂಜುನಾಥ್, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹರಿಹರ ಆನಂದಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧಾರ್ಥ, ವಿವಿಧ ಗ್ರಾ.ಪಂ. ಅಧ್ಯಕ್ಷರಾದ ಸಂಗೀತಾ, ಗೀತಾಸುರೇಶ್, ನರಸಿಂಹಮೂರ್ತಿ, ಪಾಪಣ್ಣ, ಅಂಬಿಕಾ ಲೋಕೇಶ್, ಗೌರಮ್ಮ ಗವಿಮಾದು, ಉಪಾಧ್ಯಕ್ಷರಾದ ಜಯಲಕ್ಷ್ಮೀ, ರುಕ್ಮಿಣಿ ಸುರೇಶ್, ಗ್ರಾ.ಪಂ.ಸದಸ್ಯರು, ಮುಖಂಡರಾದ ನೇರಳಕುಪ್ಪೆ ಮಹದೇವ್, ಹೊಸೂರು ಕುಮಾರ್, ಕಿರಂಗೂರು ಬಸವರಾಜು, ಮುದನಗನೂರು ಸುಭಾಷ್, ಬಸವಲಿಂಗಯ್ಯ, ನಿಂಗರಾಜ ಮಲ್ಲಾಡಿ ಇತರರು ಇದ್ದರು.
ಚಿತ್ರ.18.ಹೆಚ್.ಯು.ಎನ್.1.ಹನಗೋಡಿನಲ್ಲಿ ನಿರ್ಮಿಸಿರುವ ಎನ್.ಜೆ.ಎಂ. ಡಾ.ಜೋಗೇಂದ್ರನಾಥ್ ಆಸ್ಪತ್ರೆಯನ್ನು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ಶ್ರೀ ನಟರಾಜ ಸ್ವಾಮೀಜಿ, ಡಾ.ಎಸ್.ಶಿವಸ್ವಾಮಿ ಸೋಸಲೆ ಇತರರು ಇದ್ದರು.