More

    ನನಗೇನು ಅರ್ಪಣೆ ಮಾಡಿದಿರಿ? ಎಂದ ಪತ್ನಿಗೆ ‘ಬುದ್ಧಚರಣ’ ಅರ್ಪಿಸಿದ ಎಚ್‌ಎಸ್‌ವಿ

    ಬೆಂಗಳೂರು: ಪತ್ನಿ ಆಸ್ಪತ್ರೆಯಲ್ಲಿ ಮರಣಶೆಯ್ಯೆಯಲ್ಲಿದ್ದಾಗ ಜತೆಗೆ ನಾನೊಬ್ಬನೇ ಇದ್ದೆ. ಲೌಕಿಕವಾದ ಯಾವ ಮಾತನ್ನಾದರೂ ಆಕೆ ನನ್ನಲ್ಲಿ ಕೇಳಬಹುದಿತ್ತು. ಆದರೆ ಆಕೆ ಕೇಳಿದ ಮಾತು ಬೇರೆಯ ರೀತಿಯದ್ದು. ನೀವು ಅನೇಕ ಪುಸ್ತಕಗಳನ್ನು ಬರೆದಿದ್ದೀರಿ, ಅನೇಕರಿಗೆ ಅರ್ಪಿಸಿದ್ದೀರಿ. ನನಗೇನು ಅರ್ಪಿಸಿದ್ದೀರಿ? ಎಂದಳು. ನಾನು ನಿರುತ್ತರನಾದೆ. ಆಕೆಯೇ ಮುಂದುವರಿಸಿ, ನೀವು ಬುದ್ಧನ ಕಾವ್ಯ ಬರೆಯಬೇಕೆಂದಿದ್ದೀರ. ಅದನ್ನಾದರೂ ನನಗೆ ಅಂಕಿತ ಮಾಡಿ ಎಂದಳು…

    ‘ಬುದ್ಧಚರಣ’ ಮಹಾಕಾವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪತ್ನಿ ರಾಜಲಕ್ಷ್ಮೀ ಅವರನ್ನು ನೆನೆದು ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಭಾನುವಾರ ಭಾವುಕರಾದರು.

    ಈ ಕಾರಣಕ್ಕೆ ಬುದ್ಧಚರಣ ಕೃತಿ ಆದಷ್ಟು ಬೇಗನೆ ಬಿಡುಗಡೆಯಾಗಬೇಕಿತ್ತು. ಈ ವೇಳೆಗೆ ಕರೊನಾ ಎಂಬ ಅಮೂರ್ತ ಮಾಯೆ ಜಗತ್ತನ್ನು ಆವರಿಸಿತು. ಅನೇಕ ಆಪ್ತರು ಅಗಲಿದರು. ಆಪ್ತರ ಅಗಲಿಕೆಯೂ ದುಃಖ ಎಂದು ಬುದ್ಧ ಹೇಳಿದಂತೆ, ಅನೇಕ ಅನುಭವಗಳಾಯಿತು. ಇಂದು ಯಾವುದೂ ಕೆಟ್ಟ ವಾರ್ತೆ ಬರದಿರಲಿ ಎಂದು ಕೋರುವಷ್ಟು. ಮೃತರ ಹೆಸರುಗಳು ಈಗ ಐದುನೂರು, ಸಾವಿರ ಎಂಬ ಸಂಖ್ಯೆಗಳಾಗಿವೆ. ಮನುಷ್ಯನ ಕೈಮೀರಿದಂತಹ, ಅಂಕೆಗೆ ಸಿಕ್ಕದ ದುಃಖದ ನಿವಾರಣೆ ಹೇಗೆ ಎಂಬ ಹುಡುಕಾಟವೇ ಬುದ್ಧನ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಕಾರಣದಿಂದಾಗಿ ತಲ್ಲಣ ಹೆಚ್ಚಳವಾಯಿತು. ನನ್ನ ಕೈಯಿಂದಲೇ ಈ ಪುಸ್ತಕ ಬಿಡುಗಡೆ ಮಾಡಬೇಕು ಎಂಬ ಅಪೇಕ್ಷೆಯಿತ್ತು, ಇಂದು ಮನಸ್ಸು ಶಾಂತವಾಗಿದೆ ಎಂದು ಡಾ. ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

    ನನಗೇನು ಅರ್ಪಣೆ ಮಾಡಿದಿರಿ? ಎಂದ ಪತ್ನಿಗೆ ‘ಬುದ್ಧಚರಣ’ ಅರ್ಪಿಸಿದ ಎಚ್‌ಎಸ್‌ವಿಆತ್ಮ, ವೇದಗಳ ಪಾರಮ್ಯ, ದೈವದ ಅಸ್ತಿತ್ವವನ್ನು ಬುದ್ಧ ಮಾನ್ಯ ಮಾಡುವುದಿಲ್ಲ. ಅದನ್ನು ಯಾರಾದರೂ ಪ್ರಶ್ನಿಸಬಹುದು ಅಥವಾ ಬುದ್ಧನ ವಿಚಾರ ಎಂದು ಬಿಡಬಹುದು. ಆದರೆ ಪ್ರಶ್ನಾತೀತವಾದ ಒಂದು ಸಂಗತಿ ಎಂದರೆ ಲೋಕಪ್ರೀತಿ ಹಾಗೂ ಕಾರುಣ್ಯ. ಪ್ರಶ್ನಾತೀತನಾದ ಬುದ್ಧನನ್ನು ಕಟ್ಟಿಕೊಡಬೇಕೆಂಬುದು ನನ್ನ ಇಚ್ಛೆಯಾಗಿತ್ತು.
    | ಡಾ. ಎಚ್.ಎಸ್. ವೆಂಕಟೇಶಮೂರ್ತಿ ಹಿರಿಯ ಕವಿ

    ಹಿರಿಯ ಲೇಖಕ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಮಾತನಾಡಿ, ಎಚ್‌ಎಸ್‌ವಿ ಅವರು ತಮ್ಮ ಕಾವ್ಯ ಜೀವನದಲ್ಲಿ ಅತ್ಯಂತ ಶ್ರೇಷ್ಠವಾದ ಮಹಾಕಾವ್ಯವನ್ನು ಬುದ್ಧಚರಣದ ಮೂಲಕ ನೀಡಿದ್ದಾರೆ. ಕೃಷ್ಣ ಹಾಗೂ ಬುದ್ಧ ಭಾರತದ ಇಂದಿನ ಸಂದರ್ಭಕ್ಕೆ ಅನೇಕ ರೀತಿಯಲ್ಲಿ ಮುಖ್ಯ. ಪುತಿನ ಅವರು ಹರಿಚರಿತೆಯಲ್ಲಿ ಕೃಷ್ಣನನ್ನು ಅನಾವರಣ ಮಾಡಿದ್ದರು. ಈಗ ಎಚ್‌ಎಸ್‌ವಿ ಅವರ ಮೂಲಕ ಬುದ್ಧನ ಅನಾವರಣ ಆಗಿದೆ. ಬುದ್ಧನ ಲೋಕಕಾರುಣ್ಯದ ಒರತೆ ಇಡೀ ಕಾದಂಬರಿಯುದ್ಧಕ್ಕೂ ತೈಲಧಾರೆಯಂತೆ ಹರಿಯುತ್ತದೆ ಎಂದರು. ಕಾದಂಬರಿಕಾರ ಎಂ.ಆರ್. ದತ್ತಾತ್ರಿ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಉಪಸ್ಥಿತರಿದ್ದರು.

    ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts