ಮಾದಕ ದ್ರವ್ಯಕ್ಕೆ ಕಿಕ್ ಏರಿದ ಸದನ

ಬೆಂಗಳೂರು: ರಾಜಧಾನಿ ಸೇರಿ ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ದಂಧೆ ಹತ್ತಿಕ್ಕಲು ಗೂಂಡಾ ಕಾಯ್ದೆ ಪ್ರಯೋಗಿಸುವ ತೀರ್ವನಕ್ಕೆ ಸರ್ಕಾರ ಬಂದಿದೆ. ಜತೆಗೆ ಪೊಲೀಸ್ ವ್ಯವಸ್ಥೆ ಬಿಗಿಗೊಳಿಸುವ ಭರವಸೆ ನೀಡಿದೆ.

ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ಸದಸ್ಯರು, ಮಾದಕವಸ್ತು ಜಾಲದ ಬಗ್ಗೆ ಉದಾಹರಣೆ ಸಹಿತ ಬೆಳಕು ಚೆಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಚರ್ಚೆ ಬಳಿಕ ಉತ್ತರ ನೀಡಿದ ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವ ಡಾ. ಜಿ.ಪರಮೇಶ್ವರ್, ‘ರಾಜ್ಯದಲ್ಲಿ ಮಾದಕ ದ್ರವ್ಯಗಳ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮುಂದೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ನಿಯಂತ್ರಿಸದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರ ರನ್ನಾಗಿ ಮಾಡಲಾಗುತ್ತದೆ’ ಎಂದು ಹೇಳಿದರು.

ಪ್ರತಿ ಠಾಣೆಯಲ್ಲೂ ಮಾದಕವಸ್ತು ನಿಗ್ರಹ ವಿಭಾಗಗಳಿವೆ, ಅಧಿಕಾರಿಗಳಿಗೆ ಜವಾಬ್ದಾರಿಯನ್ನೂ ನೀಡಲಾಗಿದೆ ಎಂದ ಡಿಸಿಎಂ, ಎಷ್ಟೇ ಉನ್ನತ ಅಧಿಕಾರಿಯಾಗಿದ್ದರೂ ಸರಿ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕುಳಿತರೆ ಸಹಿಸುವುದಿಲ್ಲ. ಮಾದಕ ವಸ್ತು ವಿಚಾರದಲ್ಲಿ ಪ್ರಕರಣ ಪತ್ತೆ ಹಚ್ಚುವುದರ ಹೊರತಾಗಿ ಮಾಧ್ಯಮಗಳಲ್ಲಿ ವರದಿ ಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಹುಡುಕಿ ಟಾರ್ಗೆಟ್ ಮಾಡುತ್ತಾರೆ. ವೃತ್ತಿಪರ ಕಾಲೇಜುಗಳಲ್ಲೇ ಈ ರೀತಿ ಬೆಳವಣಿಗೆ ಹೆಚ್ಚು. ಈ ಕಾರಣಕ್ಕೆ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ವಿವಿಧ ದೇಶಗಳಿಂದ ಮೂರು- ಆರು ತಿಂಗಳ ಡಿಪ್ಲೊಮಾ ಕೋರ್ಸ್ ನೆಪದಲ್ಲಿ ಬೆಂಗಳೂರಿಗೆ ಆಗಮಿಸುವವರು ವಿಸಾ ಮುಗಿದರೂ ಇಲ್ಲೇ ಉಳಿದು, ವಿವಿಧ ವ್ಯವಹಾರ ನಡೆಸಲಾರಂಭಿಸುತ್ತಾರೆ. ಕಳೆದ ಸರ್ಕಾರದ ಅವಧಿಯಲ್ಲಿ ಇಂತಹ 1,460 ಜನರನ್ನು ಪತ್ತೆ ಹಚ್ಚಿ ಡಿಪೋಟ್ ಮಾಡಲಾಗಿತ್ತು. ಈಗಲೂ ಪತ್ತೆ ಹಚ್ಚಲಾಗುತ್ತಿದ್ದು, ತಕ್ಷಣವೇ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಬೆಂಗಳೂರಿನ ಕೊಡಿಗೆಹಳ್ಳಿಯ ಕೆಲ ಮನೆಗಳಲ್ಲಿ ಫಾರ್ವಸ್ಯುಟಿಕಲ್ ಕಂಪನಿ ಬೋರ್ಡ್ ಹಾಕಿಕೊಂಡು ಮಾದಕವಸ್ತುವಿನ ಮಾತ್ರೆ ಮಾಡುತ್ತಿದ್ದಾರೆ. ಅದನ್ನು ಬೇರೆ ದೇಶಗಳಿಗೂ ಕಳಿಸುತ್ತಿದ್ದಾರೆ. ಇತ್ತೀಚೆಗಷ್ಟೆ 5 ಕೋಟಿ ರೂ. ಮೌಲ್ಯದ ಮಾತ್ರೆಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇದೊಂದು ದೊಡ್ಡ ಜಾಲ ಅನಿಸುತ್ತಿದೆ ಎಂದ ಡಿಸಿಎಂ ಪರಮೇಶ್ವರ್, ಇಡೀ ದೇಶದಲ್ಲಿ ಒಂದು ಕಠಿಣ ಕಾನೂನು ತರುವ ಅಗತ್ಯವಿದೆ. ಹಾಗೆಯೇ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ರಾಷ್ಟ್ರವ್ಯಾಪಿ ಕಠಿಣ ಕಾನೂನು ತಂದಾಗ ಸಮಸ್ಯೆಗೊಂದು ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಜರ್ಮನಿಯಲ್ಲಿ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚುವುದಕ್ಕೆ ಅಲ್ಲಿ್ಲ ಭದ್ರತಾ ಇಲಾಖೆ ನಾಯಿಗಳಿಗೆ ತರಬೇತಿ ಕೊಟ್ಟಿರುವುದನ್ನು ಪ್ರವಾಸದ ವೇಳೆ ಕಂಡೆವು. 6 ತಿಂಗಳ ಹಿಂದೆ ವ್ಯಸನಿಯಾಗಿದ್ದರೂ ನಾಯಿಗಳು ಪತ್ತೆ ಹಚ್ಚುವಷ್ಟು ಸಾಮರ್ಥ್ಯ ಹೊಂದಿದ್ದವು ಎಂದು ಪರಮೇಶ್ವರ್ ಹೇಳಿದಾಗ, ’ಆ ನಾಯಿಗಳನ್ನು ಇಲ್ಲಿಗೂ ತರಿಸಿ’ ಎಂದು ಬಿಜೆಪಿಯ ಅರವಿಂದ್ ಲಿಂಬಾವಳಿ ಒತ್ತಾಯಿಸಿದರು. ‘ಪರಿಶೀಲಿಸೋಣ’ ಎಂದು ಜಿ.ಪರಮೇಶ್ವರ್ ಭರವಸೆ ನೀಡಿದರು.

ಶಾಲೆಗಳಲ್ಲಿ ಕಾಲಕಾಲಕ್ಕೆ ದೈಹಿಕ ಶಿಕ್ಷಕರ ನೇಮಕ ಮಾಡದೇ ಇರುವುದರಿಂದ ಮಕ್ಕಳ ಆಟೋಟಗಳಿಗೆ ಪ್ರೋತ್ಸಾಹ ನೀಡುವ ವಾತಾವರಣ ಕಡಿಮೆಯಾಗಿದೆ. ಸಂಬಂಧಪಟ್ಟ ಇಲಾಖೆಗೆ ಕೂಡಲೇ ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡುತ್ತೇನೆ.

| ಡಾ.ಜಿ.ಪರಮೇಶ್ವರ್ ಡಿಸಿಎಂ

ಯಾವುದೇ ರೈತರು ಗಾಂಜಾ, ಅಫೀಮು ಬೆಳೆಯುವುದಿಲ್ಲ. ಬುದ್ಧಿಗೇಡಿಗಳು, ಮರ್ಯಾದೆಗೆ ಅಂಜದವರು ಮಾತ್ರ ಗಾಂಜಾ ಅಫೀಮು ಬೆಳೆಯುತ್ತಾರೆ.

| ರಮೇಶ್ ಕುಮಾರ್ ಸ್ಪೀಕರ್

40-50 ಡೀಲರ್​ಗಳು

ಬೆಂಗಳೂರಲ್ಲಿ 40-50 ಡ್ರಗ್ ಡೀಲರ್​ಗಳಿದ್ದು, ಅವರನ್ನು ಕೊಲೆಗಾರರು ಎಂದೇ ಕರೆಯಬಹುದು. ಇಂಥವರನ್ನು ಹುಡುಕಿ ಕ್ರಮಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಬಿಜೆಪಿಯ ಆರ್.ಅಶೋಕ್ ಸಲಹೆ ನೀಡಿದರು. ನಾನು ಗೃಹ ಸಚಿವರಾಗಿದ್ದ ವೇಳೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾಗ 15 ದಿನ ಬಂಧನದಲ್ಲಿಡುವುದೂ ನಮ್ಮ ಕಾನೂನಿನಲ್ಲಿ ಕಷ್ಟ ಎಂಬುದು ಅರಿವಾಯಿತು. ಆಗ ಗೂಂಡಾಕಾಯ್ದೆ ಹಾಕಿಸಲು ಸೂಚಿಸಿದ್ದೆ. ನ್ಯಾಯಪೀಠ ಕೂಡ ಅ ತೀರ್ವನವನ್ನು ಎತ್ತಿಹಿಡಿದಿತ್ತು ಎಂದು ತಿಳಿಸಿದರು.

ಇದೇನು ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇ?

ಡ್ರಗ್ಸ್ ಮಾಫಿಯಾ ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಕೆಣಕಿದರು. ಹಿರಿಯ ಅಧಿಕಾರಿಗಳ ಸಭೆಯನ್ನು ತಕ್ಷಣವೇ ಕರೆದು ಡ್ರಗ್ ಡೀಲರ್​ಗಳನ್ನು ಹಿಡಿದರೆ ಬಹುಮಾನ ಕೊಡುವುದಾಗಿ ಘೋಷಿಸಿ, ಒಮ್ಮೆ ಪ್ರಮುಖ ಕಿಂಗ್​ಪಿನ್​ಗಳೆಲ್ಲ ಸಿಕ್ಕರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು.