More

    ಶೋಷಿತರಿಗೆ ಅಧಿಕಾರ ಸುಲಭವಲ್ಲ : ಡಾ.ಜಿ.ಪರಮೇಶ್ವರ್

    ತುಮಕೂರು: ಮಲಹೊರುವ ಸಮುದಾಯ ರಾಜ್ಯದಲ್ಲಿ ಡಿಸಿಎಂ ಸ್ಥಾನ ಪಡೆಯಲು 71 ವರ್ಷ ಕಾಯಬೇಕಾಯಿತು. ಶೋಷಿತ ಸಮುದಾಯಕ್ಕೆ ರಾಜಕೀಯ ಅಧಿಕಾರ ಸುಲಭವಾಗಿ ಸಿಗುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

    ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ತುಮಕೂರು ಛಲವಾದಿ ಮಹಾಸಭಾ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯನ್ನು ಅನಿಷ್ಠವಾಗಿ ಕಾಣುವ ಸಮಾಜ ಸುಸಂಸ್ಕೃತವೇ ಎಂದು ಪ್ರಶ್ನಿಸಿದರು.

    ರಾಜ್ಯದಲ್ಲಿ ಆಗುತ್ತಿರುವ ಬದಲಾವಣೆ ಗಮನಿಸುತ್ತಿದ್ದೇವೆ, ಸಮುದಾಯ ಸಂಘಟಿತವಾಗದೇ ಹೋದರೆ ರಾಜಕೀಯ ಅಧಿಕಾರ ವಂಚಿತವಾಗುತ್ತದೆ, ಸಮುದಾಯ ರಾಜಕೀಯ ಶಕ್ತಿ ಕಳೆದುಕೊಳ್ಳುತ್ತಿದ್ದು, ಸಂಘಟನೆ ಅವಶ್ಯಕವಾಗಿದೆ. ಒಂದೇ ಸಮುದಾಯ ಒಂದೇ ಸಂಘಟನೆ ಇರಲಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಭಾರತದಲ್ಲಿ ಎಷ್ಟೇ ಪ್ರತಿಭಾವಂತರಾದರೂ ಜಾತಿಗೆ ಸೀಮಿತಗೊಳಿಸುತ್ತಾರೆ, ರಾಜಕೀಯವೂ ಹೊರತಾಗಿಲ್ಲ. ಛಲವಾದಿ ಸಮುದಾಯದ ಅನೇಕ ಕಾರ್ಯಕ್ರಮಗಳಿಂದ ದೂರ ಉಳಿದೆ, ಆದರೂ ನನ್ನನ್ನು ಜಾತಿಗೆ ಸೀಮಿತಗೊಳಿಸಿದರು. 70 ವರ್ಷವಾದರೂ ದಲಿತ ಸ್ಥಿತಿ ಹಾಗೆಯೇ ಇದೆ, ಮುಂದೆ 70 ವರ್ಷವಾದರೂ ಇದು ಬದಲಾಗುತ್ತೆ ಎನ್ನುವ ವಿಶ್ವಾಸ ಇಲ್ಲ ಎಂದರು.

    ಜಾತಿ ತಾರತಮ್ಯ ನಿವಾರಣೆಗೆ ಬುದ್ಧ, ಬಸವ, ಅಂಬೇಡ್ಕರ್ ಹೋರಾಡಿದರೂ ಯಶಸ್ಸು ಸಿಗಲಿಲ್ಲ, ಗಾಂಧೀಜಿ ದಲಿತರನ್ನು ದೇವರ ಮಕ್ಕಳು ಎಂದರು. ಸಂವಿಧಾನದಿಂದಲೂ ನಮಗೆ ಸಾಮಾಜಿಕ ಸಮಾನತೆ ಸಿಗಲಿಲ್ಲ, ಯಾವ ದೇಶದಲ್ಲಿಯೂ ಇಲ್ಲದ ವರ್ಣ ವ್ಯವಸ್ಥೆ ಭಾರತದಲ್ಲಿ ಮಾತ್ರ ಇದೆ ಎಂದರು.

    ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಛಲವಾದಿ ಸಮುದಾಯದ ಶಕ್ತಿ ಪರಮೇಶ್ವರ್ ಅವರಿಂದಲೇ ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು. ಕೆಎಎಸ್ ತೇರ್ಗಡೆಯಾದ ಬಂದ್ರೇಹಳ್ಳಿ ರಂಗನಾಥ್, ಎಂ.ವಿನೋದಮ್ಮ, ಡಾ.ರವೀಂದ್ರಸಾಗರ್, ಡಾ.ಕವಿತಾ ಕೋರ್ವಿ, ಡಾ.ಬಟ್ಲೂರಿ ತಿಲಕ್ ಚಂದ್ರ, ಡಾ.ಎಂ.ಎನ್.ದಿನೇಶ್ ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಲಾವಿದ ಡಾ.ಲಕ್ಷ್ಮಣ್‌ದಾಸ್, ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಗಂಗಹನುಮಯ್ಯ, ಉಗ್ರನರಸಿಂಹಯ್ಯ, ಹರ್ತಿ ಶ್ರೀನಿವಾಸ್ ಮತ್ತಿತರರು ಇದ್ದರು.

    ಜಿಲ್ಲೆಯಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಇರುವುದು ಪರಮೇಶ್ವರ್ ಒಬ್ಬರಿಗೆ ಮಾತ್ರ. ಅಪಪ್ರಚಾರಕ್ಕೆ ಕಿವಿಗೊಡದೆ ದಲಿತ ಸಮುದಾಯದ ಎಲ್ಲರೂ ಸಹಕಾರ ನೀಡಬೇಕು, ಇದರಿಂದ ಜಿಲ್ಲೆ ಅಭಿವೃದ್ಧಿಯಾಗುತ್ತದೆ.
    ಡಿ.ಸಿ.ಗೌರಿಶಂಕರ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts