ಮಾಜಿ ಡಿಸಿಎಂ ಪರಮೇಶ್ವರ್ ಐಟಿ ದಾಳಿ ಪ್ರಕರಣ: ವಿಚಾರಣೆಗೆ ಹೆದರಿ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು

ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್​ ಆಪ್ತಸಹಾಯಕ ರಮೇಶ್ ಎಂಬುವವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಮೃತ ರಮೇಶ್​ರನ್ನು​ ನಿನ್ನೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದರೆ, ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ ಮನೆಗೆ ಬಂದ ಮೇಲೆ ರಮೇಶ್​ ತುಂಬಾ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ನಾನು ಬಡವನಾಗಿದ್ದು, ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ. ನನಗೆ ಇರಲು ಸಾಧ್ಯವಿಲ್ಲ ನನಗೆ ತನಿಖೆ ಎದರಿಸುವ ಶಕ್ತಿ ಇಲ್ಲ ಎಂದು ಇಬ್ಬರು ಆಪ್ತರ ಜತೆ ಹೇಳಿಕೊಂಡ ನಂತರದಲ್ಲಿ ರಮೇಶ್​ ನಾಪತ್ತೆಯಾಗಿದ್ದರು.

ನಾನೀಗ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ಇದ್ದೀನಿ ಎಂದು ಕೊನೆಯ ಬಾರಿ ರಮೇಶ್​ ತಮ್ಮ ಆಪ್ತರಿಗೆ ಕರೆ ಮಾಡಿದ್ದರು. ಇದೀಗ ಜ್ಞಾನಭಾರತಿ ಕ್ಯಾಂಪಸ್​ನಲ್ಲಿಯೇ ರಮೇಶ್​ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *