ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ

ಬೆಂಗಳೂರು: ಕಾಂಗ್ರೆಸ್​ – ಜೆಡಿಎಸ್​ ಸಮ್ಮಿಶ್ರ ಸರ್ಕಾರ ಆರು ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಗೃಹ ಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜಿ.ಪರಮೇಶ್ವರ್​ ಅವರು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ…

1. ಪೊಲೀಸರ ಬೇಡಿಕೆಗಳಿಗೆ ಪರಿಹಾರ ಯಾವಾಗ?

ಪೊಲೀಸ್ ವಸತಿಗೃಹ ನಿರ್ಮಾಣದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದೇವೆ. ಔರಾದ್ಕರ್ ವರದಿ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ವೇತನ ಪರಿಷ್ಕರಣೆಯೂ ಆಗಲಿದೆ. ಸೈಬರ್ ಕ್ರೖೆಂ ನಿಯಂತ್ರಿಸಲು ಮಹತ್ವದ ಬದಲಾವಣೆ ತರುತ್ತಿದ್ದೇವೆ. ಇನ್ಪೋಸಿಸ್ ಸಹಯೋಗದಲ್ಲಿ ಹೊಸ ಸೈಬರ್ ಲ್ಯಾಬ್ ರೂಪಿಸಲಾಗುತ್ತಿದೆ.

2. ಗೃಹ ಸಚಿವರಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ತೃಪ್ತಿ ತಂದಿದೆಯೇ?

ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ. ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡುತ್ತಿಲ್ಲ.

3. ಬೆಳೆಯುತ್ತಿರುವ ಬೆಂಗಳೂರು ಸಮಸ್ಯೆ ಪರಿಹಾರಕ್ಕೆ ಏನು?

ಬೆಂಗಳೂರಿನ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ವಿಷನ್ ಬೆಂಗಳೂರು 2050 ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಜವಾಬ್ದಾರಿ ತೆಗೆದುಕೊಂಡಿದೆ. ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಮೇಲ್ಸೇತುವೆ ಆರಂಭಿಸಲಾಗಿದೆ. ಕೆ.ಆರ್.ಮಾರುಕಟ್ಟೆ ರೀತಿಯಲ್ಲಿ 3 ಮಾರುಕಟ್ಟೆ ನಿರ್ವಣಕ್ಕೆ ಕ್ರಮಕೈಗೊಳ್ಳಲಾಗಿದೆ.

4. ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರವೇನು?

ರಾಮನಗರ, ಆನೇಕಲ್, ಹೊಸಕೋಟೆ, ದೊಡ್ಡಬಳ್ಳಾಪುರ, ದಾಬಸ್​ಪೇಟೆಗಳನ್ನು ಸಂರ್ಪಸಲು ಹೊರ ವರ್ತಲ ಮಾದರಿಯ ರಸ್ತೆ ನಿರ್ವಿುಸುವ ಯೋಜನೆ ಸಿದ್ಧವಾಗುತ್ತಿದೆ. ಬಿಬಿಎಂಪಿ ರಸ್ತೆಗಳನ್ನು ಆದ್ಯತೆ ಮೇರೆಗೆ ವೇಗವಾಗಿ ದುರಸ್ತಿಗೊಳಿಸಲಾಗಿದೆ. ಹೊಸ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಪೆರಿಫೆರಲ್ ರಿಂಗ್ ರಸ್ತೆಗೆ ವೇಗ ಸಿಕ್ಕಿದೆ. ಎಲಿವೇಟೆಡ್ ರಸ್ತೆ ನಿರ್ವಣಕ್ಕೂ ಸಭೆ ನಡೆದಿದ್ದು, ಪ್ರಕ್ರಿಯೆ ಆರಂಭವಾಗಿದೆ. ಮೆಟ್ರೋದಲ್ಲಿ ಆರು ಬೋಗಿ ಅಳವಡಿಕೆ ಆರಂಭವಾಗಿದೆ.

5. ರಾಜಧಾನಿಯ ವಸತಿ ರಹಿತರಿಗೆ ಸಿಹಿ ಸುದ್ದಿ ಯಾವಾಗ ಕೊಡುತ್ತೀರಾ?

ಕೆಂಪೇಗೌಡ ಬಡಾವಣೆಯಿಂದ 4,791 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 1,619.88 ಕೋಟಿ ರೂ. ವೆಚ್ಚದಲ್ಲಿ ನಿವೇಶನ ರಚನೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

6. ಬೆಂಗಳೂರು ಸ್ವಚ್ಛತೆ ಸಮಸ್ಯೆಗೆ ಪರಿಹಾರವೇನು?

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ 500 ರೂಪಾಯಿ ದಂಡಕ್ಕೆ ಆದೇಶ ನೀಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಷಲ್ ನೇಮಕ ಮಾಡಲಾಗುತ್ತದೆ. ತ್ಯಾಜ್ಯ ಸಂಸ್ಕರಣೆ ಸಂಬಂಧ ಫ್ರಾನ್ಸ್​ಗೆ ಭೇಟಿ ನೀಡಿದ್ದೇನೆ. ಸೀಗೆಹಳ್ಳಿ, ಕನ್ನಳ್ಳಿ ಹಾಗೂ ಚಿಕ್ಕನಾಗಮಂಗಲದಲ್ಲಿ ತ್ಯಾಜ್ಯದಿಂದ ವಿದ್ಯುತ್ ಘಟಕ ನಿರ್ವಣಕ್ಕೆ ಒತ್ತು ಕೊಡಲಾಗಿದೆ.