ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ: ಐಟಿ ಅಧಿಕಾರಿಗಳಿಗೆ ಪೊಲೀಸ್​ ನೋಟಿಸ್​ ನೀಡದಿರಲು ಕಾರಣವೇನು?

ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದ್ದು, ಸದ್ಯ ಐಟಿ ಅಧಿಕಾರಿಗಳಿಗೆ ನೋಟಿಸ್​ ನೀಡಲು ಜ್ಞಾನ ಭಾರತಿ ಪೊಲೀಸರು ಮುಂದಾಗಿಲ್ಲ.

ಮೃತ ರಮೇಶ್​ ಅವರ ಕುಟುಂಬ ಐಟಿ ಅಧಿಕಾರಿಗಳ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದು, ಅಧಿಕಾರಿಗಳಿಗೆ ನೋಟಿಸ್ ನೀಡುವ ಮೊದಲು ಪೊಲೀಸರು ಪ್ರಾಥಮಿಕ ತನಿಖೆ ನಡೆಸಲಿದ್ದಾರೆ. ತನಿಖೆಯಲ್ಲಿ ಆರೋಪ ಸಾಬೀತಾಗಿ, ಕಿರಕುಳದ ಸಾಕ್ಷ್ಯಾಧಾರಗಳು ಲಭಸಿದರೇ ಮಾತ್ರ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳಿಂದ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ಲಭ್ಯವಾಗಿದೆ.

ಮೊದಲು ಮೃತ ರಮೇಶ್ ಬರೆದಿರುವ ಡೆತ್​ನೋಟ್ ಬಗ್ಗೆ ಪರೀಶಿಲನೆ ನಡೆಸಲಿದ್ದಾರೆ. ಡೆತ್​ನೋಟ್​ನಲ್ಲಿರುವ ಬರವಣಿಗೆ ರಮೇಶ್​ನವರದ್ದ ಅಥವಾ ಇಲ್ಲವಾ ಎಂಬುದರ ಬಗ್ಗೆ ಎಫ್​ಎಸ್​ಎಲ್​ನಿಂದ ವರದಿ ಬರಬೇಕಿದೆ. ಇದರೊಂದಿಗೆ ರಮೇಶ್ ಮನೆಗೆ ಐಟಿ ಅಧಿಕಾರಿಗಳು ಬಂದುಹೋಗಿದ್ದರ ಬಗ್ಗೆಯೂ ತನಿಖೆ ನಡೆಯಲಿದೆ. ಇಷ್ಟೇ ಅಲ್ಲದೆ, ಮಲ್ಲತಹಳ್ಳಿಯ ರಮೇಶ್ ನಿವಾಸದಲ್ಲಿರುವ ಸಿಸಿಟಿವಿ ಫೂಟೇಜ್ ಹಾಗೂ ರಮೇಶ್ ಕೊನೆಯ ಕರೆಗಳು ಮತ್ತು ಮಾತುಕತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.

ಹಾಗೇ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಮೊದಲು ಪ್ರಾಥಮಿಕ ತನಿಖೆ ನಡೆಸಿ, ನಂತರ ಐಟಿ ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ
ನಾನು ಬಡವನಾಗಿದ್ದು, ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ. ನನಗೆ ಇರಲು ಸಾಧ್ಯವಿಲ್ಲ. ನನಗೆ ತನಿಖೆ ಎದರಿಸುವ ಶಕ್ತಿ ಇಲ್ಲ ಎಂದು ಇಬ್ಬರು ಆಪ್ತರ ಜತೆ ಶನಿವಾರ ಮೊಬೈಲ್​ನಲ್ಲಿ ಮಾತನಾಡಿ, ನಂತರದಲ್ಲಿ ರಮೇಶ್​ ನಾಪತ್ತೆಯಾಗಿದ್ದರು. ಬಳಿಕ ಜ್ಞಾನ ಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶವವಾಗಿ ಪತ್ತೆಯಾಗಿದ್ದರು.

Leave a Reply

Your email address will not be published. Required fields are marked *