ವಿಜಯಪುರ: ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವಲ್ಲಿ ದಾರ್ಶನಿಕ ವಚನ ಪಿತಾಮಹ ಡಾ. .ಗು. ಹಳಕಟ್ಟಿ ಕಾರ್ಯ ಅಪಾರ ಹಾಗೂ ಅನನ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಡಾ. .ಗು. ಹಳಕಟ್ಟಿ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳಕಟ್ಟಿಯವರ ಸಾರ್ಥಕ ಸಾಧನೆಯನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ಮಹಾಚೇತನಗಳ, ದಾರ್ಶನಿಕರ, ಚಿಂತಕರ ಹಾಗೂ ಸಮಾಜ ಸುಧಾರಕರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹಳಕಟ್ಟಿ ಅವರ ಜೀವನಾದರ್ಶಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಸಾಧನೆಗೆ ಇಂತಹ ದಾರ್ಶನಿಕರ ತತ್ವಾದರ್ಶಗಳು ಪ್ರೇರಣೆಯಾಗಬೇಕು ಎಂದರು.
ಸಾಹಿತಿ ಡಾ. ಸಂಗಮೇಶ ಮೇತ್ರಿ ಉಪನ್ಯಾಸ ನೀಡಿ, ಡಾ. ಫ.ಗು. ಹಳಕಟ್ಟಿ ಅವರು ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟವರು. ಅವರು ಸಮಾಜ ಸೇವೆಗೆ ಬಳಸಿಕೊಂಡ ಮಾರ್ಗ ಶರಣರ ಮಾರ್ಗ, ಕಾಯಕ ನಿಷ್ಠೆ. ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.
ವಿಜಯಪುರದಲ್ಲಿ ಹತ್ತಿ ಮಾರಾಟ ಕೇಂದ್ರ ಆರಂಭಿಸಿದ ಡಾ. .ಗು. ಹಳಕಟ್ಟಿ, ಒಕ್ಕಲುತನ ಅಭಿವೃದ್ಧಿ ಸಂಘ ಆರಂಭಿಸಿದರು. ಮಣ್ಣಿನ ಮಹತ್ವ ಅದನ್ನು ಉಳಿಸುವ ಬಗೆಗೆ ರೈತರಿಗೆ ಅರಿವು ಮೂಡಿಸುತ್ತಿದ್ದರು. ಶೈಕ್ಷಣಿಕ, ಕೃಷಿ, ಸಮಾಜ, ಆರ್ಥಿಕ ಸೇರಿ ಹಲವು ಕ್ಷೇತ್ರಗಳಲ್ಲಿ ಶ್ರಮಿಸಿದರು. ಹಲವು ಭಾಷೆಗಳ ಬಲ್ಲವರಾಗಿದ್ದರು. 250 ವಚನಕಾರರ ವಚನ ಸಾಹಿತ್ಯ ಬೆಳಕಿಗೆ ತಂದ ವಿಜಯಪುರದ ಪ್ರಭೆ ಎಂದರು.
ಡಾ. .ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಮಾತನಾಡಿ, ಸತ್ಯಕ್ಕಾಗಿ ಬದುಕಿದ ಶರಣ ಡಾ. .ಗು. ಹಳಕಟ್ಟಿ, ಶರಣರ ಇತಿಹಾಸ, ಸಾಹಿತ್ಯ ಪರಿಶೋಧಿಸಿದ ಸತ್ಯ ಶೋಧಕ ಹಾಗೂ ಸಂಶೋಧಕರಾಗಿದ್ದರು ಎಂದರು.
ಡಾ.ಗು ಹಳಕಟ್ಟಿ ಅವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯ ಮಹಾಂತ ಗುಲಗಂಜಿ ಹಾಗೂ .ಗು. ಹಳಕಟ್ಟಿ ಅವರ ಮೊಮ್ಮಗ ಗಿರೀಶ ಹಳಕಟ್ಟಿ ಅವರನ್ನು ಸನ್ಮಾನಿಸಲಾಯಿತು. ವಚನ ಗಾಯನ, ನಾಟ್ಯಕಲಾ ಡ್ಯಾನ್ಸ್ ಶಾಲೆ ವತಿಯಿಂದ ವಚನ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಪಂ ಯೋಜನಾ ಉಪನಿರ್ದೇಶಕ ಎ.ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಬಿ.ಎಂ. ನೂಲವಿ, ಎ.ಬಿ. ಅಂಕದ ಉಪಸ್ಥಿತರಿದ್ದರು.