ಬಾಂಗ್ಲಾದೇಶ ಸಚಿವನ ಚಿಕಿತ್ಸೆಗಾಗಿ ಕನ್ನಡಿಗ ಡಾ. ದೇವಿ ಶೆಟ್ಟಿ ಅವರಿಗೆ ಮನವಿ ಮಾಡಿ ಕರೆಸಿಕೊಂಡ ಪ್ರಧಾನಿ ಶೇಖ್​ ಹಸೀನಾ

ಡಾಕಾ: ಬಾಂಗ್ಲಾದೇಶದ ಸಚಿವ ಉಬೇದುಲ್ಲಾ ಖಾದರ್​ ಅವರು ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಕನ್ನಡಿಗ, ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್​ ಶೆಟ್ಟಿ ಅವರನ್ನು ಅಲ್ಲಿನ ಪ್ರಧಾನಿ ಶೇಕ್​ ಹಸೀನಾ ಅವರು ಮನವಿ ಮಾಡಿ ಕರೆಸಿಕೊಂಡಿದ್ದಾರೆ.

ಉಬೇದುಲ್ಲಾ ಖಾದರ್​ ಅವರು ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸರ್ಕಾರದಲ್ಲಿ ಸಾರಿಗೆ ಸಚಿವರೂ ಆಗಿದ್ದಾರೆ. ಸದ್ಯ ಹೃದಯ ಸಂಬಂಧಿ ಸಮಸ್ಯೆಗೆ ಸಿಲುಕಿರುವ ಅವರು ಬಾಂಗ್ಲಾದೇಶದ ಬಿಎಸ್​ಎಂಎಂಯು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಖಾದರ್​ ಅವರ ಆರೋಗ್ಯ ವಿಷಮವಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಡಾ. ದೇವಿಪ್ರಸಾದ್​ ಶೆಟ್ಟಿ ಅವರಿಗೆ ಕರೆ ಮಾಡಿರುವ ಬಾಂಗ್ಲಾದೇಶ ಪ್ರಧಾನಿ ಶೇಕ್​ ಹಸೀನಾ, ಖಾದರ್​ ಅವರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.

ಹಸೀನಾ ಅವರಿಂದ ಕರೆ ಬಂದ ಕೂಡಲೇ ಬಾಂಗ್ಲಾದೇಶಕ್ಕೆ ತೆರಳಿರುವ ದೇವಿ ಶೆಟ್ಟಿ, ಡಾಕಾ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನೇರವಾಗಿ ಬಿಎಸ್​ಎಂಎಂಯು ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಕುರಿತು ಬಾಂಗ್ಲಾದೇಶದ “ಡಾಕಾ ಟ್ರಿಬ್ಯೂನ್​” ವರದಿ ಮಾಡಿದೆ.