ತಾಳಿಕೋಟೆ: ಪಟ್ಟಣದ ಎಸ್.ಎಸ್. ವಿದ್ಯಾಸಂಸ್ಥೆಯ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನ.3 ರಿಂದ 5 ರವರೆಗೆ ನಡೆಯಲಿರುವ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಮೈದಾನ ಒಳಗೊಂಡು ಇನ್ನಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ವಿಜಯಪುರ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಹೇಳಿದರು.
ಪಟ್ಟಣದ ಎಸ್.ಎಸ್.ವಿದ್ಯಾಸಂಸ್ಥೆಗೆ ಗುರುವಾರ ಭೇಟಿ ನೀಡಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಸಂಬಂಧಿಸಿ ಪರಿಶೀಲಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಮಟ್ಟದ ಬಾಲಕ-ಬಾಲಕಿಯರ 2024 -25ನೇ ಸಾಲಿನ ವಾಲಿಬಾಲ್ ಕ್ರೀಡಾಕೂಟ ಯಶಸ್ವಿಯಾಗಲು ಎಲ್ಲ ಪದವಿಪೂರ್ವ ಶಿಕ್ಷಣ ಇಲಾಖೆ ಸಿಬ್ಬಂದಿ ಎಚ್.ಎಸ್.ಪಾಟೀಲರೊಂದಿಗೆ ಕೈಜೋಡಿಸಬೇಕು. ರಾಜ್ಯದ ಅಂದಾಜು 32 ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸಚಿವರು, ಶಾಸಕರು, ಶಿಕ್ಷಣ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಆಗಮಿಸುವರು. ದೈಹಿಕ ಶಿಕ್ಷಣ ಎಲ್ಲ ಶಿಕ್ಷಕರು ಭಾಗಿಯಾಗಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷೆ ಎಸ್.ಎಸ್.ದುರ್ಗಿ, ವಿಜಯಪುರ ಪಪೂ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ, ಶಿಕ್ಷಕ ಶ್ರೀಕಾಂತ ಪತ್ತಾರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲ, ಆರ್.ಎಲ್.ಕೊಪ್ಪದ, ಪ್ರಾಚಾರ್ಯ ಶಿವುಕುಮಾರ ನಾಯಕ, ಉಪನ್ಯಾಸಕರಾದ ಅಮರೇಶ ನಾಗರಾಳ, ಶರಣು ಬಿರಾದಾರ ಮಾತನಾಡಿದರು.
ಇದಕ್ಕೂ ಮುನ್ನ ಕ್ರೀಡಾಕೂಟದ ಕೈಪಿಡಿ, ಟ್ರೋಫಿ ಬಿಡುಗಡೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬ್ರಿಲಿಯಂಟ್ ಶಾಲೆ ಅಧ್ಯಕ್ಷ ನಾನಾಗೌಡ ಪಾಟೀಲ, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ್, ಬಿ.ಎನ್. ನಾಯ್ಕೋಡಿ, ಕೆ.ಜಿ.ಲಮಾಣಿ, ನೀಲಮ್ಮ ಪಾಟೀಲ, ಕಾಶಿನಾಥ ಮುರಾಳ, ಮುರಿಗೆಪ್ಪ ಸರಶಟ್ಟಿ, ಪ್ರಾಚಾರ್ಯೆ ಎಂ.ಎಸ್.ಬಿರಾದಾರ, ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ಬಿ.ಮಂಗ್ಯಾಳ, ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್.ರಾಯಗೊಂಡ ಇತರರಿದ್ದರು. ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿ, ವಂದಿಸಿದರು.