ಕೊಪ್ಪಳ: ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಕುಂಟು ನೆಪ ಇಟ್ಟುಕೊಂಡು ಗಂಗಾವತಿ ತಹಸೀಲ್ದಾರ್ ಧಾರ್ಮಿಕ ಚಿಹ್ನೆ ಇರುವ ವಿದ್ಯುತ್ ದೀಪ ತೆರವಿಗೆ ಆದೇಶಿಸಿದ್ದು ಸರಿಯಲ್ಲ. ಇದರಿಂದ ಇತರರ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ತಿಳಿಸಿದ್ದಾರೆ.
ಪವಾಡ ಪುರುಷ ಹನುಮನ ನೆಲದಲ್ಲಿ ಇಂಥ ಕೃತ್ಯ ಸಹಿಸಲಾಗದು. ನಗರ ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ವಿದ್ಯುತ್ ದೀಪ ಕಂಬ ಮೇಲೆ ಧಾರ್ಮಿಕ ಚಿಹ್ನೆ ಬಳಸಲಾಗಿದೆ. ಇದು ಅಂಜನಾದ್ರಿ ನೆನಪಿಸುವ ಪ್ರತಿಕ. ಇದನ್ನೇ ಗಂಗಾವತಿ ತಹಸೀಲ್ದಾರ್, ಸ್ಥಳಿಯ ಕೆಲವು ಸಂಘಟನೆಗಳ ವಿನಾಕಾರಣ ಆರೋಪವೆಂದು ಪರಿಗಣಿಸಿವೆ. ಆರಂಭದಲ್ಲೇ ತೆರವುಗೊಳಿಸಲು ಯತ್ನಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಸ್ಥಳಕ್ಕೆ ತೆರಳಿ ವಾಸ್ತಾವಾಂಶ ಪರಿಶೀಲಿಸದೆ ಲಿಖಿತ ಆದೇಶ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಸಾರ್ವಜನಿಕರ ಟೀಕೆ ವ್ಯಕ್ತವಾಗುತ್ತಲೇ ಆದೇಶ ಹಿಂಪಡೆದಿದ್ದಾರೆ.
4 ಕೋಟಿ ರೂ.ನಲ್ಲಿ ಗಂಗಾವತಿ ನಗರ ಸೌಂದರ್ಯಿಕರಣ ಮಾಡಲಾಗುತ್ತಿದೆ. ಇದನ್ನು ಹಾಳು ಮಾಡಲು ಸ್ಥಳಿಯ ರಾಜಕೀಯ ಹಿತಾಸಕ್ತಿ ಹಾಗೂ ಎಸ್ಡಿಪಿಐ ಸಂಟನೆ ಕಾದು ಕುಳಿತಿವೆ. ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ. ರಾಮನಿಗೆ ಇರುವಷ್ಟು ಆದ್ಯತೆ ಹನುಮನಿಗಿದೆ. ರಾಜಕೀಯ ಕಾರಣಕ್ಕೆ ದೀಪ ಕಂಬಗಳ ತೆರವಿಗೆ ಮುಂದಾಗಿದ್ದು ಸರಿಯಲ್ಲ.
ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದ ರೀತಿ ವರ್ತಿಸಬೇಕು. ಅಭಿವೃದ್ಧಿ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಎದುರಿಸಬೇಕಾಗುತ್ತದೆ. ಘಟನೆಯನ್ನು ಕೇಂದ್ರ ಸರ್ಕಾರ ಗಮನಕ್ಕೆ ತರಲಾಗುವುದು. ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸುತ್ತೇವೆ. ಕೇಂದ್ರದಿಂದ ಬೆಟ್ಟ ಅಭಿವೃದ್ಧಿಗೆ ಮನವಿ ಮಾಡಲಾಗುವುದೆಂದು ತಿಳಿಸಿದ್ದಾರೆ.