ಮದ್ದೂರು: ಡಾ.ಬಿ.ಆರ್.ಅಂಬೇಡ್ಕರ್ ಎಂದರೆ ವ್ಯಕ್ತಿಯ ಹೆಸರಷ್ಟೇ ಅಲ್ಲ, ಒಂದು ದೊಡ್ಡ ಶಕ್ತಿ, ಅದು ಜ್ಞಾನದ ಸಂಕೇತ ಡಾ.ಅಂಬೇಡ್ಕರ್ ಅವರಿಗಿರುವ ಅಪಾರವಾದ ಜ್ಞಾನದಿಂದ ಅವರನ್ನು ವಿಶ್ವಜ್ಞಾನಿ ಎಂದು ಕರೆಯುತ್ತಾರೆ ಎಂದು ಗಾಯಕ ಮತ್ತು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಯುವಕರ ಸೇವಾ ಟ್ರಸ್ಟ್‌ನಿಂದ ಗುರುವಾರ ಆಯೋಜಿಸಿದ್ದ ಟ್ರಸ್ಟ್ ಪದಗ್ರಹಣ ಕಾರ್ಯಕ್ರಮ ಮತ್ತು ಡಾ.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ತಮ್ಮ ಕಷ್ಟಗಳನ್ನು ನುಂಗಿ ಅನೇಕ ಪದವಿಗಳನ್ನು ಪಡೆದು ಹೋರಾಟ ಮಾಡಿ ಮಾನವೀಯ ಮೌಲ್ಯಗಳನ್ನು ಈ ನೆಲದಲ್ಲಿ ಬಿತ್ತಿ ಸಮಾನತೆ ಬೆಳೆಯನ್ನು ಬೆಳೆದರು. ಸಮಗ್ರ ಭಾರತೀಯರ ಏಳಿಗೆಗಾಗಿ ಡಾ.ಅಂಬೇಡ್ಕರ್ ಅವಿರತ ಶ್ರಮಿಸಿದ್ದಾರೆ. ವಿಶ್ವಕ್ಕೆ ಮಾದರಿಯಾದ ಸಂವಿಧಾನ ಕೊಟ್ಟಿದ್ದಾರೆ, ನಾವೆಲ್ಲರೂ ಆ ಸಂವಿಧಾನದ ಅಡಿಯಲ್ಲಿ ಘನತೆ ಗೌರವದಿಂದ ಬದುಕುತ್ತಿದ್ದೇವೆ. ಆದ್ದರಿಂದ ಸಂವಿಧಾನವನ್ನ ರಕ್ಷಿಸಬೇಕು, ಡಾ.ಅಂಬೇಡ್ಕರ್ ಅವರನ್ನು ಸದಾ ನೆನೆಯಬೇಕೆಂದರು ಎಂದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಕಾರ್ಯದರ್ಶಿ ಟಿ.ಎಂ.ಸುಂದರೇಶ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಎಲ್ಲರೂ ವಿದ್ಯಾವಂತರಾಗಿ ಮತ್ತು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆದು ಲೋಕ ಜ್ಞಾನವನ್ನು ಬೆಳೆಸಿಕೊಂಡು ಸಂಘಟಿತರಾಗಿ ತಮ್ಮ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದು ಕರೆಕೊಟ್ಟರು.
ಯಜಮಾನರಾದ ಪೋಸ್ಟ್ ಬೋರಯ್ಯ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ವರುಣ್ ಸಂವಿಧಾನ ಪೀಠಿಕೆ ಬೋಧಿಸಿದರು ಹಾಗೂ ಶಾಲಾ-ಕಾಲೇಜಿನ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್‌ಗಳನ್ನು ವಿತರಣೆ ಮಾಡಲಾಯಿತು.
ಡಾ.ಅಂಬೇಡ್ಕರ್ ಯುವಕರ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಸಿ.ಮಧು, ಕಾರ್ಯದರ್ಶಿ ಟಿ.ಮಹೇಶ್, ಉಪಾಧ್ಯಕ್ಷ ಸತೀಶ್, ಖಜಾಂಚಿಗಳಾದ ವಿಶ್ವ ನಾರಾಯಣ, ಸದಸ್ಯರಾದ ರವಿ, ಆನಂದ್, ಮನು, ಪ್ರಭುಸ್ವಾಮಿ, ಹೇಮಂತ, ಸುನಿಲ್ ಕುಮಾರ್, ಸ್ವಾಮಿ, ಶಿವ, ಮನೋಜ್, ಕಿರಣ್, ಮತ್ತು ಮಹಾಲಿಂಗಯ್ಯ, ವೈಕುಂಠಪ್ಪ, ಸುನಿಲ್ ಕುಮಾರ್, ಟಿ.ಬೋರಯ್ಯ, ಮಲ್ಲೇಶ್, ಮಳ್ಳಪ್ಪ, ಈಶ್ವರಪ್ಪ ಇದ್ದರು.
