ಗಂಡಂದಿರ ಬೆನ್ನತ್ತಿದೆ ಡೌರಿ ಭೂತ!

| ವರುಣ ಹೆಗಡೆ ಬೆಂಗಳೂರು

ವಿವಾಹಿತ ಮಹಿಳೆಯರ ಜೀವ, ಜೀವನಕ್ಕೆ ರಕ್ಷಾಕವಚವಾಗಿದ್ದ ವರದಕ್ಷಿಣೆ ನಿಷೇಧ ಕಾಯ್ದೆ ಗಂಡಂದಿರ ವಿರುದ್ಧ ಸೇಡಿಗೆ ಬಳಕೆಯಾಗುತ್ತಿರುವ ನೂರಾರು ಪ್ರಕರಣ ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಕೌಟುಂಬಿಕ ಕಲಹ, ಸಣ್ಣಪುಟ್ಟ ಘರ್ಷಣೆಗೂ ಈ ಕಾಯ್ದೆ ಅಸ್ತ್ರ ಬಳಸಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿ ರುವ ಮಹಿಳೆಯರಿಂದಾಗಿ ಅಮಾಯಕರು ಜೈಲುಪಾಲಾಗು ವಂತಾಗಿದೆ. 1961ರಲ್ಲೇ ‘ವರದಕ್ಷಿಣೆ ನಿಷೇಧ ಅಧಿನಿಯಮ’ ಜಾರಿಗೆ ಬಂದಿದ್ದರೂ ಈವರೆಗೂ ಅದರ ಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಪತಿಯ ಕುಟುಂಬದ ಹಣದ ವ್ಯಾಮೋಹಕ್ಕೆ ಮಹಿಳೆಯ ಬಾಳು ನರಕದ ಕೂಪವಾಗಕೂಡದೆಂಬ ಉದ್ದೇಶದಿಂದ ಜಾರಿಗೆ ಬಂದ ಈ ಕಾನೂನಿನ ಪ್ರಕಾರ ಆರೋಪಿಗಳಿಗೆ ಜಾಮೀನುರಹಿತ ಶಿಕ್ಷೆ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಈ ಕಾಯ್ದೆ ದುರ್ಬಳಕೆ ಹೆಚ್ಚಾಗಿದೆ. 2017ರಲ್ಲಿ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 131 ಪ್ರಕರಣ ಸುಳ್ಳು ಎಂಬುದು ತನಿಖೆಯ ಬಳಿಕ ದೃಢಪಟ್ಟಿದೆ.

2018ರಲ್ಲಿ ದುರುದ್ದೇಶಪ್ರೇರಿತ 50 ಸುಳ್ಳು ಪ್ರಕರಣ ಬಯಲಿಗೆ ಬಂದಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಹುರುಳಿಲ್ಲ ಎಂಬ ಕಾರಣದಿಂದ ಪೊಲೀಸರು ಠಾಣೆಯಲ್ಲೇ ರಾಜಿ ಮಾಡಿಸಿ ಕಳುಹಿಸಿದ್ದಾರೆ.

ರಾಜಧಾನಿಯಲ್ಲೇ ಅಧಿಕ

ರಾಜಧಾನಿ ಬೆಂಗಳೂರಿನಲ್ಲೇ ಈ ಕಾನೂನಿನ ದುರ್ಬಳಕೆ ಮಿತಿಮೀರಿದೆ. ಅಷ್ಟೇ ಅಲ್ಲದೆ ವರದಕ್ಷಿಣೆ ಕಾಯ್ದೆ ಬಳಸಿ ಹಣ ವಸೂಲಿ ಮಾಡುವ ಜಾಲ ಕೂಡ ಬೆಳೆಯಲಾರಂಭಿಸಿದ್ದು, ಅಮಾಯಕ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಬೇಕಾದ ಪ್ರಸಂಗ ಎದುರಾಗುತ್ತಿದೆ. 2017ರಲ್ಲಿ ಬೆಂಗಳೂರಿನಲ್ಲಿ ವರದಿಯಾದ 727 ಪ್ರಕರಣದಲ್ಲಿ 68 ಸುಳ್ಳು ಪ್ರಕರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ರುಜುವಾತಾಗಿದೆ. ಅದೇ ರೀತಿ, 2018ರಲ್ಲಿ 690 ಪ್ರಕರಣದಲ್ಲಿ 23 ಪ್ರಕರಣ ಸುಳ್ಳು ಎನ್ನುವುದು ಸಾಬೀತಾಗಿದೆ. 2017-18ರಲ್ಲಿ ಮೈಸೂರಿನಲ್ಲಿ-16, ತುಮಕೂರಿನಲ್ಲಿ-13, ದಾವಣಗೆರೆಯಲ್ಲಿ-10, ಹಾವೇರಿ-7, ಉ.ಕನ್ನಡ-6, ಕಲಬುರಗಿ-5 ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುಳ್ಳು ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಸುಳ್ಳು ಪ್ರಕರಣ ವರದಿಯಾಗಿದೆ.

ವರದಕ್ಷಿಣೆ ಜೀವಂತ

ಶಿಕ್ಷಣ-ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಸಂಭವಿಸಿದರೂ ವರದಕ್ಷಿಣೆ ಪಿಡುಗು ರಾಜ್ಯದಲ್ಲಿ ನಿಂತಂತಿಲ್ಲ. 2017ರಲ್ಲಿ ರಾಜ್ಯದಲ್ಲಿ 1572 ಮತ್ತು 2018ರಲ್ಲಿ 1522 ವರದಕ್ಷಿಣೆ ಪ್ರಕರಣಗಳು ವರದಿಯಾಗಿವೆ. ಇನ್ನು ಈ ವರ್ಷ ಜನವರಿ ತಿಂಗಳೊಂದರಲ್ಲೇ 168 ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಬೆಂಗಳೂರಿನಲ್ಲಿ ಈ ವರ್ಷ ಒಂದೇ ತಿಂಗಳಲ್ಲಿ 69 ಪ್ರಕರಣ ದಾಖಲಾಗಿದೆ. 2017ರಲ್ಲಿ 727 ಹಾಗೂ 2018ರಲ್ಲಿ 690 ಪ್ರಕರಣ ವರದಿ ಆಗಿದ್ದು, ರಾಜಧಾನಿಯಲ್ಲಿ ಕೌಟುಂಬಿಕ ಸಂಬಂಧಗಳು ಹದಗೆಡುತ್ತಿರುವುದರ ದ್ಯೋತಕ. 2017-18ರಲ್ಲಿ ತುಮಕೂರಿನಲ್ಲಿ-155, ಬಳ್ಳಾರಿಯಲ್ಲಿ-140, ಮೈಸೂರಿನಲ್ಲಿ-136, ಹಾಸನದಲ್ಲಿ-134, ರಾಯಚೂರಿನಲ್ಲಿ-118, ದಾವಣಗೆರೆಯಲ್ಲಿ-106, ಮಂಡ್ಯ-78- ಹೆಚ್ಚಿನ ಸಂಖ್ಯೆಯಲ್ಲಿ ವರದಕ್ಷಿಣೆ ಪ್ರಕರಣಗಳು ವರದಿಯಾಗಿವೆ.

ಸುಳ್ಳು ಕೇಸ್​ಗೆ ಕಾರಣ?

# ತನ್ನ ಬೇಕು, ಬೇಡಗಳಿಗೆ ಪತಿ ಹಣ ನೀಡದಿದ್ದಾಗ

# ಕುಟುಂಬದಿಂದ ಹೊರಬಂದು, ಪ್ರತ್ಯೇಕ ಮನೆ ನಿರ್ವಣಕ್ಕೆ ಒಪ್ಪದಿದ್ದಾಗ

# ಅನೈತಿಕ ಸಂಬಂಧ ಹೊಂದಿದ್ದು, ಪತಿಯಿಂದ ಬಿಡುಗಡೆ ಬೇಕೆಂದಾಗ

# ಧನವಂತರಿಂದ ಹಣ ಸುಲಿಗೆ ಮಾಡಲು ನಕಲಿ ದಾಖಲಾತಿ ಸೃಷ್ಟಿಸಿ, ಪ್ರಕರಣ ದಾಖಲಿಸುವುದು

# ಹಳೆಯ ದ್ವೇಷದಿಂದ ಕುಟುಂಬದ ಸದಸ್ಯರಿಗೆ ಪಾಠ ಕಲಿಸುವ ಉದ್ದೇಶ

# ಮಕ್ಕಳ ವಿಚಾರವಾಗಿ ಉಂಟಾಗುವ ಕೌಟುಂಬಿಕ ಕಲಹಗಳು

ಮುಂಚೂಣಿಯಲ್ಲಿ ರಾಜ್ಯ

ಭಾರತಿಯ ದಂಡ ಸಂಹಿತೆ ಸೆಕ್ಷನ್ 498ಎ ದುರ್ಬಳಕೆಯಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ಕೇಂದ್ರ ಗೃಹ ಸಚಿವಾಲಯ ಮಾಹಿತಿ ಪ್ರಕಾರ ದೇಶದಲ್ಲಿ ದಾಖಲಾಗುವ ಒಟ್ಟು ಪ್ರಕರಣದಲ್ಲಿ ಶೇ.33 ಕರ್ನಾಟಕದ್ದೇ ಆಗಿದೆ. ಇದರಲ್ಲಿ ಹಲವು ಪ್ರಕರಣಗಳು ದುರುದ್ದೇಶಪೂರಿತವಾದದ್ದು. ಸುಳ್ಳು ಪ್ರಕರಣ ದಾಖಲು ಪಟ್ಟಿಯಲ್ಲಿ ಬಿಹಾರ ಪ್ರಥಮ ಹಾಗೂ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಉಳಿದಂತೆ ಜಾರ್ಖಂಡ್, ಉತ್ತರ ಪ್ರದೇಶ ನಂತರದ ಸ್ಥಾನ ಹೊಂದಿವೆ.

ವರದಕ್ಷಿಣೆ ಕೇಳಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕೆಂಬ ಕಾರಣಕ್ಕೆ ‘ವರದಕ್ಷಿಣೆ ನಿಷೇಧ ಅಧಿನಿಯಮ’ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೌಟುಂಬಿಕ ಸಮಸ್ಯೆಯನ್ನು ವರದಕ್ಷಿಣೆ ಎಂದೇ ಹಲವರು ನಮೂದಿಸುತ್ತಾರೆ. ಉಳಿದಂತೆ ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳಗಳು ಗಣನೀಯವಾಗಿ ತಗ್ಗಿವೆ. ಕಾನೂನು ದುರುಪಯೋಗ ಮಾಡಿಕೊಳ್ಳಬಾರದು.

| ನಾಗಲಕ್ಷ್ಮಿ ಬಾಯಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು