ಬೆಂಗಳೂರು: ಅನುಸೂಚಿತ ಜಾತಿ ಮತ್ತು ಬುಡಕಟ್ಟು ದೌರ್ಜನ್ಯ ಪ್ರತಿಬಂಧ ಕಾನೂನು ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೂರನೇ ತ್ರೈಮಾಸಿಕ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿರುವ ಸ್ಥಳಗಳಲ್ಲಿ 1 ತಿಂಗಳೊಳಗಾಗಿ ಜಿಲ್ಲಾಡಳಿತ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಹಾಗೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಮತ್ತು ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಕಾನೂನು ಮಾಹಿತಿ ಕುರಿತು ಜಿಲ್ಲಾಡಳಿತದಿಂದ ಕೈಪಿಡಿ ಹೊರತರಲಾಗುವುದ ಎಂದು ಮಾಹಿತಿ ನೀಡಿದರು.
ಕ್ಯಾಲೆಂಡರ್ ವರ್ಷದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಕುಂದುಕೊರತೆ ಸಭೆ ನಡೆಸಬೇಕೆಂದು ಎಲ್ಲ ತಹಸೀಲ್ದಾರ್‌ಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಕಾನೂನಿನ ನಿಯಮಾನುಸಾರ ಸಹಾಯಧನ ನೀಡುವುದು, ಅನುಕಂಪದ ಆಧಾರದ ಮೇರೆಗೆ ಸರ್ಕಾರಿ ಉದ್ಯೋಗ ನೀಡುವುದು, ಬಿಪಿಎಲ್ ಪಡಿತರ ಚೀಟಿ, ಆಯುಷ್ಮಾನ್ ಕಾರ್ಡ್, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಸರ್ಕಾರಿ ಜಮೀನು ಅವಲಂಬಿತ ಬುಡಕಟ್ಟು ರೈತ ವರ್ಗಕ್ಕೆ ಉಚಿತ ನಿವೇಶನ ನೀಡುವಂತಹ ಕಲ್ಯಾಣ ಕಾರ್ಯಕ್ರಮ ಅರ್ಹರಿಗೆ ತಲುಪಿಸುವ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಸಕಾಲದ ಮೂಲಕ ದಾಖಲಾಗುವ ದೌರ್ಜನ್ಯ ಪ್ರಕರಣಗಳನ್ನು 7 ದಿನಗಳೊಳಗೆ ಪರಿಶೀಲಿಸಿ, ಪರಿಹಾರ ನೀಡಬೇಕೆಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಪ್ರೀತಿ ಮತ್ತಿತರರು ಇದ್ದರು.