More

  ಬಿತ್ತನೆ ಬೀಜದ ಬೆಲೆ ದುಪ್ಪಟ್ಟು!

  ಶೇಖರ್ ಸಂಕೋಡನಹಳ್ಳಿ ಅರಸೀಕೆರೆ
  ಬರ ಘೋಷಣೆಯ ನಡುವೆಯೂ ರಾಜ್ಯ ಸರ್ಕಾರ ಬಿತ್ತನೆ ಬೀಜದ ಬೆಲೆ ದುಪ್ಪಟ್ಟು ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

  ಇದಕ್ಕೆ ಪೂರಕ ಎನ್ನುವಂತೆ ಹೆಸರು, ಉದ್ದು, ಮುಸುಕಿನ ಜೋಳ, ತೊಗರಿ ಸೂರ್ಯಕಾಂತಿ, ಹಲಸಂದೆ ಒಳಗೊಂಡಂತೆ ವಿವಿಧ ಬಿತ್ತನೆ ಬೀಜಗಳ ಬೆಲೆ ದ್ವಿಗುಣಗೊಂಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. 2023 ಹಂಗಾಮಿನಲ್ಲಿ ಪ್ರತಿ ಐದು ಕೆ.ಜಿಯ ಹೆಸರು ಬೀಜದ ಚೀಲಕ್ಕೆ 500 ರೂ, ಉದ್ದು 570, ಹಲಸಂದೆ 490, ತೊಗರಿ 373 ರೂ.ದರದಲ್ಲಿ ಮಾರಾಟವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು 930, ಉದ್ದು 785, ಹಲಸಂದೆ 675, ತೊಗರಿ 447, ಸೂರ್ಯಕಾಂತಿ 1880 ರೂ. ನಿಗದಿಪಡಿಸಿದೆ. ಬಿಡಿಗಾಸಿನ ಸಬ್ಸಿಡಿ ಹೆಸರಿನಲ್ಲಿ ದಾಸ್ತಾನು ಮಾರಾಟಕ್ಕೆ ಕೃಷಿ ಇಲಾಖೆಗಳಿಗೆ ಬಿತ್ತನೆ ಬೀಜ ಕಳುಹಿಸಿಕೊಟ್ಟಿದ್ದರೂ ಅನ್ನದಾತ ಕೊಳ್ಳುವ ಗೋಜಿಗೆ ಹೋಗಿಲ್ಲ ಎನ್ನುವ ಸಂಗತಿ ಹೊರಬಿದ್ದಿದೆ. ಜತೆಗೆ ರೈತರ ಜೇಬಿಗೆ ಕತ್ತರಿ ಹಾಕಲು ಹೊರಟಿರುವ ಸರ್ಕಾರದ ನಡೆ ವಿರುದ್ಧ ರೈತಪರ ಸಂಘಟನೆಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದೆ.

  ಲಭ್ಯವಿರುವ ಮಾಹಿತಿ ಅನುಸಾರ ತಾಲೂಕಿಗೆ 95 ಕ್ವಿಂಟಾಲ್ ಹೆಸರು, 34 ಉದ್ದು, 150 ಹಲಸಂದೆ, 12 ಕ್ವಿಂಟಾಲ್ ಸೂರ್ಯಕಾಂತಿ, 90.40 ಕ್ವಿಂಟಾಲ್ ಮುಸುಕಿನ ಜೋಳ ಒಳಗೊಂಡಂತೆ ವಿವಿಧ ಧಾನ್ಯಗಳನ್ನು ಬೀಜ ನಿಗಮಗಳ ಮೂಲಕ ಸರಬರಾಜು ಮಾಡಲಾಗಿದೆ. ಈ ಪೈಕಿ 13.5 ಕ್ವಿಂಟಾಲ್ ಹೆಸರು, ಹಲಸಂದೆ 47, 3.5 ಕ್ವಿಂಟಾಲ್ ಉದ್ದು ಹಾಗೂ ಒಂದೂವರೆ ಕ್ವಿಂಟಾಲ್ ಮುಸುಕಿನ ಜೋಳ ಮಾರಾಟವಾಗಿದೆ. ಹನ್ನೆರಡು ಕ್ವಿಂಟಾಲ್ ಸೂರ್ಯಕಾಂತಿ ಬೀಜ ಬಿತ್ತನೆಗೆ ಲಭ್ಯವಿದ್ದು ಇದೂವರೆಗೆ ಕೇವಲ ನಾಲ್ಕು ಕೆ.ಜಿ. ಬಿಕರಿಯಾಗಿರುವುದು ಬೆಲೆ ಏರಿಕೆ ಬಿಸಿ ತಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ವಸ್ತುಸ್ಥಿತಿ ಹೀಗಿದ್ದರೂ ಬೆಲೆ ಹೆಚ್ಚಳದ ಕುರಿತು ವಿಪಕ್ಷಗಳು ದನಿ ಎತ್ತದಿರುವುದು ಅನುಮಾನಕ್ಕೆ ಕಾರಣವಾಗಿದೆ.

  ಕೃಷಿ ಚಟುವಟಿಕೆ ಚುರುಕು: ತಾಲೂಕಿನಾದ್ಯಂತ ಕಳೆದೆರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣಗೊಂಡಿದೆ. ಜ.10ರಿಂದ ಮೇ.21ರವರೆಗೆ 210 ಮಿ.ಮೀ. ಮಳೆ ದಾಖಲಾಗಿದೆ. ಕಸಬಾ, ಕಣಕಟ್ಟೆ ಹೊರತುಪಡಿಸಿ ಗಂಡಸಿ, ಜಾವಗಲ್ ಹಾಗೂ ಬಾಣವರ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ವರುಣ ಕೃಪೆ ತೋರಿರುವುದಾಗಿ ಅಂಕಿ ಅಂಶಗಳಿಂದ ದೃಢಪಟ್ಟಿದೆ. ಹಾಲಿ ಮುಂಗಾರು ಹಂಗಾಮಿನಲ್ಲಿ 50,161 ಹೆಕ್ಟೇರ್ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ನೆಲಗಡಲೆ, ಹೆಸರು, ಉದ್ದು, ಹಲಸಂದೆ, ಸೂರ್ಯಕಾಂತಿ, ಎಳ್ಳು, ಹತ್ತಿ, ನೆಲಗಡಲೆ, ತೊಗರಿ ಒಳಗೊಂಡಂತೆ ಅಂದಾಜು 1800 ಹೆಕ್ಟೇರ್ ಮಾತ್ರವೇ ಬಿತ್ತನೆಯಾಗಿವೆ. ದಿಢೀರ್ ಬಿತ್ತನೆ ಬೀಜದ ಬೆಲೆ ಹೆಚ್ಚಳವೇ ಹಿನ್ನಡೆಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

  ದಾಸ್ತಾನು-ಪೂರ್ವ ಮುಂಗಾರು ಮಳೆ ಕೊಂಚ ವಿಳಂಬವಾಗಿದ್ದರೂ ಇದೀಗ ಬಿರುಸು ಪಡೆದುಕೊಂಡಿದೆ. ಬಿತ್ತನೆ ಕಾರ್ಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿಎಸಿಸಿ, ಟಿಎಪಿಸಿಎಂಎಸ್ ಒಳಗೊಂಡಂತೆ ರಸಗೊಬ್ಬರ ಮಾರಾಟ ಮಾಡುವ ಡೀಲರ್‌ಗಳ ಬಳಿ 3600 ಟನ್ ರಸಗೊಬ್ಬರ ದಾಸ್ತಾನು ಮಾಡಿರುವುದು ರೈತರನ್ನು ನಿರಾಳರನ್ನಾಗಿಸಿದೆ. ಕೇಂದ್ರ ಸರ್ಕಾರ ನೀಡಿರುವ ಬರಪರಿಹಾರ ಹಣವನ್ನು ರೈತರ ಖಾತೆಗೆ ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಿದೆ. ಮತ್ತೊಂದೆಡೆ ಬಿತ್ತನೆ ಬೀಜಗಳ ದರ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳಲು ಮುಂದಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಮಳೆ ಬೆಳೆಯಿಲ್ಲದೇ ಸಾಲದ ಸುಳಿಗೆ ಸಿಲುಕಿರುವ ರೈತರ ನೆರವಿಗೆ ಧಾವಿಸುವ ಮೂಲಕ ಬರ ಘೋಷಣೆಯ ಹೆಸರಿನಲ್ಲಿ ಬರೆ ಎಳೆದಿರುವುದು ಎಷ್ಟರಮಟ್ಟಿಗೆ ಸರಿ? ಸಮಸ್ಯೆ ಮನಗಂಡು ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು ಎನ್ನುವ ಕೂಗು ಎಲ್ಲಡೆ ಕೇಳಿ ಬಂದಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts