ಅವಳಿ ಕೊಲೆ ಆರೋಪಿಗಳ ಸೆರೆ

ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸೇರಿದಂತೆ ಸಾಕ್ಷಿನಾಶ ಮತ್ತು ಒಳಸಂಚು ರೂಪಿಸಿದ ಆರೋಪದಲ್ಲಿ ಕೋಟದ ಪ್ರಭಾವಿ ವ್ಯಕ್ತಿ ಹಾಗೂ ರಾಜಕಾರಣಿ ಸಹಿತ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋಟ ಪರಿಸರದ ಪ್ರಮುಖ ವ್ಯಕ್ತಿ ಪ್ರಕರಣಕ್ಕೆ ಸಂಬಂಧಿಸಿ ಹಿಂದೊಮ್ಮೆ ವಿಚಾರಣೆಗೆ ಒಳಪಟ್ಟಿದ್ದು, ಗುರುವಾರ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಆರೋಪಿ ಹರೀಶ್ ರೆಡ್ಡಿ ಸಹಿತ ಎಲ್ಲ ಆರೋಪಿಗಳು ಪೊಲೀಸರ ವಶವಾಗಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದೆ.

ಲೋಹಿತ್ ಪೂಜಾರಿ ಇತ್ತೀಚೆಗೆ ಮೆಹೆಂದಿ ಕಾರ‌್ಯಕ್ರಮ ಮುಗಿಸಿ ಮನೆಗೆ ಬರುತ್ತಿದ್ದಾಗ ಆತನ ಮೇಲೆ ಹಲ್ಲೆಗೆ ಸಂಚು ನಡೆದಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಹಂತಕರಿಂದ ತಪ್ಪಿಸಿಕೊಂಡ ಲೋಹಿತ್ ತನ್ನ ಮನೆ ಸೇರಿದ್ದ. ಬಳಿಕ ಭರತ್ ಹಾಗೂ ಯತೀಶ್‌ಗೆ ಕರೆಮಾಡಿ ರಕ್ಷಣೆ ಕೊಡುವಂತೆ ವಿನಂತಿಸಿದ್ದ. ಸ್ನೇಹಿತನ ಮನವಿ ಮೇರೆಗೆ ಆತನ ಮನೆಗೆ ತೆರಳಿದ್ದ ಭರತ್ ಹಾಗೂ ಯತೀಶ್‌ನನ್ನು ಹರೀಶ್ ರೆಡ್ಡಿ ಹಾಗೂ ಸಹಚರರು ಕೊಚ್ಚಿ ಕೊಲೆಗೈದಿದ್ದರು. ಘಟನೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದರು.

ಕೊಲೆ ನಡೆದ ದಿನ ಕೋಟದ ಪ್ರಮುಖ ವ್ಯಕ್ತಿ ಜತೆ ಹರೀಶ್ ರೆಡ್ಡಿ ಪೋನ್ ಮೂಲಕ ಮಾತನಾಡಿದ್ದು, ಈ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲಿಯಾದರೂ ತಲೆ ಮರೆಸಿಕೊಳ್ಳುವಂತೆ ಆರೋಪಿಗಳಿಗೆ ಸಲಹೆ ನೀಡಿದ್ದ ಎನ್ನಲಾಗಿದೆ.