ಮಹಿಳಾ ವಿಭಾಗಾಧಿಕಾರಿಗೆ ಸಾರ್ವಜನಿಕವಾಗಿ ಧಮಕಿ ಹಾಕಿದ ಯುಪಿ ಶಾಸಕ

ಆಗ್ರಾ: ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯ ಬಿಜೆಪಿ ಶಾಸಕ ಉದಯ್​ಭಾನ್​ ಚೌಧರಿ ಸಾರ್ವಜನಿಕವಾಗಿ ಮಹಿಳಾ ಉಪವಿಭಾಗಾಧಿಕಾರಿಗೆ ಬೆದರಿಕೆಯೊಡ್ಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚೌಧರಿ ಮಾತನಾಡಿ, ನಾನೊಬ್ಬ ಶಾಸಕ ಎಂಬುದು ನಿನಗೆ ಗೊತ್ತಿಲ್ವಾ? ಹಾಗೇ ನನ್ನ ಹಾಗೂ ಪ್ರಜಾಪ್ರಭುತ್ವದ ಶಕ್ತಿ ಏನೆಂದು ನಿನಗೆ ಅರ್ಥವಾಗಿಲ್ವಾ? ಎಂದು ಸಾರ್ವಜನಿಕವಾಗಿಯೇ ಮಹಿಳಾ ಅಧಿಕಾರಿ​ ಗರೀಮಾ ಸಿಂಗ್​ರನ್ನು ಗದರಿದ್ದಾರೆ.

ನೀನೋರ್ವ ಸೇವಕಳಷ್ಟೇ. ನೀನು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದೀಯಾ? ನೀನು ಉಪ-ವಿಭಾಗೀಯ ಅಧಿಕಾರಿ​ ಎಂಬುದನ್ನು ನನಗೆ ತೋರಿಸುತ್ತಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಕ್ಷೇತ್ರದ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗರೀಮಾರನ್ನು ಸೋಮವಾರ ಭೇಟಿ ಮಾಡಿದ್ದ ವೇಳೆ ಈ ಘಟನೆ ನಡೆದಿದೆ. ಶಾಸಕರು ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲಿದ್ದ ಕೆಲವರು ಅಧಿಕಾರಿಣಿಗೆ ಜೈಕಾರ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಸಂಬಂಧ ಯಾವುದೇ ದೂರು ಈವರೆಗೆ ದಾಖಲಾಗಿಲ್ಲ. (ಏಜೆನ್ಸೀಸ್​)