ತಂಡದ ಬಸ್‌ನಲ್ಲಿ ಇವರಿದ್ದರೆ ಹೆಂಡತಿ ಮಗಳೊಂದಿಗೆ ನಾನು ಪ್ರಯಾಣಿಸುವುದಿಲ್ಲ: ಹರ್ಭಜನ್ ಸಿಂಗ್

ನವದೆಹಲಿ: ಖಾಸಗಿ ಟಿವಿ ಸೆಲೆಬ್ರಿಟಿ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್​ರ ವಿರುದ್ಧ ತನಿಖೆಗೆ ಆದೇಶಿಸಿರುವ ಬಿಸಿಸಿಐ ಅವರಿಬ್ಬರನ್ನು ಅಮಾನತುಗೊಳಿಸಿರುವ ಬೆನ್ನಲ್ಲೇ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್‌ ಹರ್ಭಜನ್ ಸಿಂಗ್ ಅಸಮಾಧಾನವನ್ನು ಹೊರಹಾಕಿದ್ದಾರೆ.

ಹಿರಿಯ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕ್ರಿಕೆಟ್‌ ಮತ್ತು ಆಟಗಾರರ ಪ್ರತಿಷ್ಠೆಯನ್ನು ಹಾಳುಗೆಡವಿದ್ದಕ್ಕಾಗಿ ಅಮಾನತುಗೊಂಡಿರುವ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ.

ಪಾಂಡ್ಯ ಮತ್ತು ರಾಹುಲ್ ಇಬ್ಬರು ಇದ್ದಾಗ ನನ್ನ ಹೆಂಡತಿ ಮತ್ತು ಮಗಳು ಇದ್ದರೆ ತಾನು ಆರಾಮದಾಯಕವಾಗುವುದಿಲ್ಲ. ತಂಡದ ಬಸ್‌ನಲ್ಲಿ ಇವರೊಂದಿಗೆ ನಾನು ಹೆಂಡತಿ ಮಗಳನ್ನು ಕರೆದುಕೊಂಡು ಪ್ರಯಾಣಿಸುವುದಿಲ್ಲ. ಅವರು ಮಹಿಳೆಯರನ್ನು ಕೇವಲ ಒಂದೇ ಒಂದು ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ ಮತ್ತು ಅದು ಸರಿಯಲ್ಲ ಎಂದು ಹೇಳಿದ್ದಾರೆ.

ಇವುಗಳ ಕುರಿತು ನಮ್ಮ ಸ್ನೇಹಿತರೊಂದಿಗೂ ಕೂಡ ನಾವು ಮಾತನಾಡಬಾರದು. ಆದರೆ, ಅವರು ಸಾರ್ವಜನಿಕ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದರಿಂದಾಗಿ ಜನರು ಆಟಗಾರರನ್ನು ಬೇರೆ ಅರ್ಥದಲ್ಲಿಯೇ ಭಾವಿಸಲು ಮುಂದಾಗುತ್ತಾರೆ. ಹರ್ಭಜನ್ ಸಿಂಗ್ ಈ ರೀತಿ ಇದ್ದರೆ, ಅನಿಲ್‌ ಕುಂಬ್ಳೆ ಹೀಗಿದ್ದರೆ ಮತ್ತು ಸಚಿನ್‌ ತೆಂಡುಲ್ಕರ್‌ ಹೀಗಿದ್ದಿರಬಹುದೆಂದು ಯೋಚಿಸಲು ಶುರು ಮಾಡುತ್ತಾರೆ.

ಪಾಂಡ್ಯ ಆ ರೀತಿಯಲ್ಲಿ ತಂಡದ ಸಂಸ್ಕೃತಿಯ ಕುರಿತು ಮಾತನಾಡುವುದಕ್ಕೆ ತಂಡದಲ್ಲಿ ಎಷ್ಟು ವರ್ಷದಿಂದ ಇದ್ದಾರೆ. ಬಿಸಿಸಿಐ ಸರಿಯಾದ ಕ್ರಮವನ್ನೇ ತೆಗೆದುಕೊಂಡಿದೆ. ಇದು ನಿರೀಕ್ಷಿತ ಕ್ರಮವಾಗಿದ್ದು, ಇದರಲ್ಲಿ ಆಶ್ಚರ್ಯಪಡುವಂತದ್ದೇನು ಇಲ್ಲ. ಇದೇ ಸರಿಯಾದ ಮಾರ್ಗ ಎಂದು 38 ವರ್ಷದ ಹರ್ಭಜನ್ ಸಿಂಗ್ ಅಮಾನತು ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ್ದಾರೆ. (ಏಜೆನ್ಸೀಸ್)