ಶಿವಮೊಗ್ಗ: ಪ್ರಸ್ತುತ ಚೀನಾ ಯುದ್ಧಾಸ್ತ್ರ ಬಳಸುವುದನ್ನು ಬಿಟ್ಟು, ಹೊಸ ಗೇಮಿಂಗ್ ಆ್ಯಪ್‌ಗಳನ್ನು ಸಿದ್ಧಪಡಿಸುತ್ತಿದೆ. ಅದರ ಮೂಲಕ ಲಕ್ಷಾಂತರ ಯುವ ಸಮೂಹವನ್ನು ಹಾಳು ಮಾಡುತ್ತಿದೆ ಎಂದು ಪ್ರಾಚಾರ್ಯ ಸುಕೇಶ್ ಸೇರಿಗಾರ ಆತಂಕ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಪೇಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುವಜನರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ಮೊಬೈಲ್ ಬಳಸುವುದರಿಂದ ಸಮಯ ಹಾಗೂ ಮನಸ್ಸು ಎರಡೂ ಹಾಳಾಗುತ್ತದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಜ್ಞಾನ ಗಳಿಕೆಯೇ ಶಿಕ್ಷಣದ ಉದ್ದೇಶ. ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣ ಪಡೆಯಬೇಕು. ಮೆಕಾಲೆ ಶಿಕ್ಷಣ ಪದ್ಧತಿಗಿಂತಲೂ ಭಾರತೀಯ ಶಿಕ್ಷಣ ಪದ್ಧತಿ ಹೆಚ್ಚು ಉತ್ತಮವಾಗಿದೆ. ಪ್ರಾಚೀನ ಭಾರತ ವಿಶ್ವಕ್ಕೆ ಶ್ರೇಷ್ಠತೆಯನ್ನು ಸಾರಿತ್ತು ಎಂದು ತಿಳಿಸಿದರು.
ಸಾಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಡಿ.ಕೆ.ವಿಜಯಲಕ್ಷ್ಮೀ, ನಿಸರಾಣಿಯ ವಿ.ಎಸ್.ಪ್ರೌಢಶಾಲೆಯ ಶಿಕ್ಷಕ ಟಿ.ಎಂ.ಲಕ್ಷ್ಮೀಶ, ಕಾರೇಹಳ್ಳಿ ಬಿ.ಜಿ.ಎಸ್ ಪ್ರೌಢಶಾಲೆಯ ಎ.ಎಂ.ವೀರರಾಜೇಂದ್ರ ಸ್ವಾಮಿ, ದೊಡ್ಡೇರಿ ಜ್ಞಾನವಾಹಿನಿ ಪ್ರೌಢಶಾಲೆಯ ಕೆ.ಎಂ.ಅಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರಜ್ಞಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಉಪಾಧ್ಯಕ್ಷ ಪ್ರೊ.ಎಚ್.ಆನಂದ್, ಪ್ರಾಚಾರ್ಯ ಪ್ರೊ.ಬಿ.ಎನ್.ವಿಶ್ವನಾಥಯ್ಯ ಉಪಸ್ಥಿತರಿದ್ದರು. ಡಾ.ಮೈತ್ರೇಯಿ ಕಾರ್ಯಕ್ರಮ ನಿರ್ವಹಿಸಿದರು.