ಖಾದಿ ಬಟ್ಟೆಯ ರಾಷ್ಟ್ರಧ್ವಜ ಬಳಸಿ

ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ಲಾಸ್ಟಿಕ್ ಧ್ವಜ ಬಿಟ್ಟು ಖಾದಿ ಬಟ್ಟೆಯ ರಾಷ್ಟ್ರಧ್ವಜ ಬಳಸಿ ಧ್ವಜದ ಗೌರವ ಕಾಪಾಡುವ ಜತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹ್ಯಾಪಿ ಹೋಮ್ ಇಂಡಿಯಾ ಟ್ರಸ್ಟ್ ಅಧ್ಯಕ್ಷೆ ಇರೇನಿ ಎ. ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಧ್ವಜ ಬಳಕೆ ದೇಶಕ್ಕೆ ಅವಮಾನ ಮಾಡಿದಂತೆ. ಆ. 15ರ ಬಳಿಕ ಅವು ಕಸದ ತೊಟ್ಟಿ, ಚರಂಡಿ, ರಸ್ತೆಗಳ ಮೇಲೆ ಬಿದ್ದಿರುತ್ತವೆ. ಪ್ಲಾಸ್ಟಿಕ್ ಎನ್ನುವ ಕಾರಣಕ್ಕೆ ಅವುಗಳನ್ನು ಯಾರೂ ಮುಟ್ಟುವ ಗೋಜಿಗೂ ಹೋಗುವುದಿಲ್ಲ. ಇವುಗಳನ್ನು ಬಳಸಿದರೆ, ಚೀನಾ ದೇಶಕ್ಕೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಖಾದಿಯಿಂದ ಸಿದ್ಧಪಡಿಸಿದ ಬಿಐಎಸ್ ಮಾರ್ಕ್ ಹೊಂದಿದ ಧ್ವಜ ಬಳಸಬೇಕು ಎಂದರು.

ಟ್ರಸ್ಟ್ ವತಿಯಿಂದ 160 ಶಾಲಾ-ಕಾಲೇಜ್​ಗಳಿಗೆ ಭೇಟಿ ನೀಡಿ, ಖಾದಿ ಧ್ವಜ ಕುರಿತು ಜಾಗೃತಿ ಮೂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ, ತಾಲೂಕು ಆಡಳಿತಗಳಿಗೂ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದರು.