ನಮ್ಮ ವಿರುದ್ಧ ಕೆಟ್ಟ ಪದ ಬಳಸಬೇಡಿ ಎಂದು ಅಭಿಮಾನಿಗಳ ಬಳಿ ಅವಲತ್ತುಕೊಂಡ ಪಾಕ್​ ಆಟಗಾರ

ಇಸ್ಲಾಮಾಬಾದ್​: ಪ್ರತಿಷ್ಠಿತ ವಿಶ್ವಕಪ್​ ಟೂರ್ನಿಯಲ್ಲಿ ಇದುವರೆಗೂ ಭಾರತದ ವಿರುದ್ಧ ಒಂದೇ ಒಂದು ಗೆಲುವನ್ನು ಕಂಡಿರದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಈ ಬಾರಿಯೂ ಭಾರೀ ಮುಖಭಂಗವನ್ನು ಅನುಭವಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಪಾಕ್​ ಅಭಿಮಾನಿಗಳು ತಮ್ಮ ಕ್ರಿಕೆಟಿಗರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ಇದರಿಂದ ನೊಂದಿರುವ ಪಾಕ್​ ಆಟಗಾರನೊಬ್ಬ ಕೆಟ್ಟ ಪದಗಳನ್ನು ಬಳಸಬೇಡಿ ಎಂದು ಅಂಗಲಾಚಿಕೊಂಡಿದ್ದಾನೆ.

ಟ್ವೀಟ್​ ಮೂಲಕ ಪಾಕ್​ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿರುವ ವೇಗದ ಬೌಲರ್​ ಮೊಹಮ್ಮದ್​ ಅಮೀರ್​, ನೀವು ನಮ್ಮ ಆಟದ ವೈಖರಿಯನ್ನು ಟೀಕೆ ಮಾಡಿ. ಆದರೆ, ದಯವಿಟ್ಟು ಯಾವುದೇ ಆಟಗಾರನ ವಿರುದ್ಧ ಕೆಟ್ಟ ಪದಗಳನ್ನು ಬಳಸಬೇಡಿ. ನಾವು ಮತ್ತೆ ಹೊಸ ಹುರುಪಿನಿಂದ ಪುಟಿಯುತ್ತೇವೆ. ನಮಗೆ ನಿಮ್ಮ ಬೆಂಬಲ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.

ಪಾಕ್​, ಭಾರತದ ವಿರುದ್ಧ 89 ರನ್​ ಅಂತರದಿಂದ ಪಂದ್ಯ ಸೋತ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪಾಕ್​ ವಿರುದ್ಧ ಅಭಿಮಾನಿಗಳು ಸಾಕಷ್ಟು ಟೀಕೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ, ಪಾಕ್​ ನಾಯಕ ಸರ್ಫರಾಜ್​ ಅಹಮ್ಮದ್​ ತಮ್ಮ ಪ್ರಧಾನಿಯ ಸಲಹೆಯನ್ನೇ ಧಿಕ್ಕರಿಸಿದ್ದರು. ಅಲ್ಲದೇ, ಮೈದಾನಲ್ಲಿ ಆಕಳಿಕೆ, ಪಂದ್ಯದಲ್ಲಿನ ತಮ್ಮ ತಪ್ಪು ನಿರ್ಧಾರದಿಂದಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕ್​ ಸೋಲನ್ನು ಅಭಿಮಾನಿಗಳು ಇನ್ನು ಕೂಡ ಸಹಿಸಿಕೊಳ್ಳಲಾಗದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಭಾನುವಾರ ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ಗೆ 336ರನ್ ಪೇರಿಸಿತ್ತು. ಪ್ರತಿಯಾಗಿ ಪಾಕಿಸ್ತಾನ ತಂಡ, 35 ಓವರ್​ಗಳಲ್ಲಿ 6 ವಿಕೆಟ್​ಗೆ 166 ರನ್ ಗಳಿಸಿದಾಗ ಮಳೆ ಅಡಚಣೆಯಿಂದ ಪಂದ್ಯ ನಿಂತಿತು. ಬಳಿಕ ಡಿಎಲ್​ಎಸ್ ನಿಯಮದನ್ವಯ 40 ಓವರ್​ಗಳಲ್ಲಿ 302 ರನ್ ಗಳಿಸುವ ಪರಿಷ್ಕೃತ ಗುರಿ ಪಡೆದ ಪಾಕ್, ಉಳಿದ 30 ಎಸೆತಗಳಲ್ಲಿ 136 ರನ್ ಗಳಿಸಬೇಕಿತ್ತು. ಈ ಕಠಿಣ ಸವಾಲಿಗೆ ಪ್ರತಿಯಾಗಿ 6 ವಿಕೆಟ್​ಗೆ 212 ರನ್ ಗಳಿಸಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

Leave a Reply

Your email address will not be published. Required fields are marked *