ಪಾಕ್​ ವಿರುದ್ಧದ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ ಗಂಗೂಲಿ, ಸಚಿನ್​

ಮ್ಯಾಂಚೆಸ್ಟರ್​: ಭಾನುವಾರ ಇಲ್ಲಿನ ಎಮಿರೇಟ್ಸ್‌ ಓಲ್ಡ್‌ ಟ್ರಾಫೋರ್ಡ್‌ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಕ್ರಿಕೆಟ್​ ಪ್ರೇಮಿಗಳು ಉಭಯ ತಂಡಗಳ ಹೋರಾಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ನಾಯಕರಾದ ಸಚಿನ್​ ತೆಂಡುಲ್ಕರ್​ ಮತ್ತು ಸೌರವ್​ ಗಂಗೂಲಿ ಭಾರತ ತಂಡದ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ಭಾರತ ತಂಡ ಎಚ್ಚರಿಕೆಯಿಂದಿರಬೇಕು. ತಾವು ಗೆಲ್ಲುವ ಫೇವರೆಟ್​ ತಂಡ ಎಂಬ ಭಾವನೆಯಲ್ಲಿ ಮೈದಾನಕ್ಕೆ ಇಳಿಯಬಾರದು. 2017ರಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್ಸ್​ನಲ್ಲಿ ಭಾರತ ಇದೇ ಭಾವನೆಯೊಂದಿಗೆ ಕಣಕ್ಕಿಳಿದಿತ್ತು ಎನಿಸುತ್ತದೆ. ಹಾಗಾಗಿಯೇ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರದ ಪಂದ್ಯವನ್ನು ಟೀಂ ಇಂಡಿಯಾ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು ಎಂದು ಗಂಗೂಲಿ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ತಂಡ ಹೇಗೆ ಆಡುತ್ತದೆ ಎಂಬುದನ್ನು ಮೊದಲೇ ಊಹಿಸುವುದು ಕಷ್ಟ. ಜತೆಗೆ ಪಾಕಿಸ್ತಾನ ಅಪಾಯಕಾರಿ ತಂಡವೂ ಹೌದು. ಹಾಗಾಗಿ ಪಾಕ್​ ತಂಡವನ್ನು ಲಘುವಾಗಿ ಪರಿಗಣಿಸಬಾರದು. ಪಾಕಿಸ್ತಾನದ ವಿರುದ್ಧ ಪಕ್ಕಾ ಯೋಜನೆ ರೂಪಿಸಿಕೊಂಡು ಕಣಕ್ಕಿಳಿಯಬೇಕು ಎಂದು ಸಚಿನ್​ ತೆಂಡುಲ್ಕರ್​ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವಕಪ್​ ನಾಲ್ಕು ವರ್ಷಕ್ಕೆ ಒಮ್ಮೆ ಬರುತ್ತದೆ. ಹಾಗಾಗಿ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕ್​ ನಡುವಿನ ಪಂದ್ಯ ಹೆಚ್ಚು ಮಹತ್ವ ಪಡೆದಿರುತ್ತದೆ. ಆದರೆ, ಆಟಗಾರರಿಗೆ ಇದು ಮತ್ತೊಂದು ಪಂದ್ಯವಷ್ಟೇ. ಹಾಗಾಗಿ ಟೀಂ ಇಂಡಿಯಾದ ಆಟಗಾರರು ತಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಆಡಬೇಕು. ಉತ್ತಮವಾಗಿ ಬೌಲಿಂಗ್​ ಮಾಡಬೇಕು. ಕ್ಯಾಚ್​ಗಳನ್ನು ಕೈಚೆಲ್ಲಬಾರದು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಮಾಜಿ ತರಬೇತುದಾರ ಅನಿಲ್​ ಕುಂಬ್ಳೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *