ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು

ಹೈದರಾಬಾದ್​: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಮೈಸೂರಿನ ದೊರೆ ಟಿಪ್ಪು ಸುಲ್ತಾನ್​ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ದೇಶದ ಒಳಗಿರುವ ಉಗ್ರ ಸಂಘಟನೆಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲಿ ಎಂದು ಎಐಎಂಐಎಂ ಪಕ್ಷದ ನಾಯಕ, ಸಂಸದ ಅಸಾದುದ್ದೀನ್​ ಒವೈಸಿ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಾರೆ.

ಹೈದರಾಬಾದ್​ನಲ್ಲಿ ಮಾತನಾಡಿರುವ ಅವರು, ” ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅವರು ಇಬ್ಬರು ಮುಸ್ಲಿಂ ದೊರೆಗಳಾದ ಟಿಪ್ಪು ಸುಲ್ತಾನ್​ ಮತ್ತು ಬಹದ್ದೂರ್​ ಜಾಫರ್​ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಟಿಪ್ಪುವಿನ ಬಗ್ಗೆ ಅವರು ಸಂಸತ್​ನಲ್ಲಿ ಆಡಿ ಹೊಗಳಿದ್ದಾರೆ. ಆದರೆ, ಟಿಪ್ಪು ಹಿಂದು ವಿರೋಧಿಯಾಗದೇ ತಮ್ಮ ಎದುರಾಳಿಗಳಿಗೆ ದುಸ್ವಪ್ನವಾಗಿದ್ದ ಎಂಬುದನ್ನು ಖಾನ್​ ತಿಳಿದುಕೊಳ್ಳಬೇಕು. ಇಮ್ರಾನ್​ ಖಾನ್​ ಆಟಮ್​ ಬಾಂಬ್​ಗಳ ಬಗ್ಗೆ ಮಾತನಾಡುತ್ತಾರೆ. ಇದೊಂದು ವಿಲಕ್ಷಣ ಗುಣ. ಬಾಂಬ್​​ಗಳು ನಮ್ಮ ಬಳಿ ಇಲ್ಲ ಎಂದು ಅವರು ಭಾವಿಸಿದ್ದಾರೆಯೇ,” ಎಂದು ಗುಡುಗಿದರು.

ಇದೇ ವೇಳೆ ಅವರು ಉಗ್ರ ಸಂಘಟನೆಗಳಾದ ಲಷ್ಕರ್​ ಎ ತೊಯ್ಬಾ ಮತ್ತು ಜೈಷ್​ ಎ ಮೊಹಮದ್​ ಸಂಘಟನೆಗಳನ್ನು ರಾಕ್ಷಸ ಸಂಘಟನೆಗಳು ಎಂದು ಜರಿದರು. ಪಾಕಿಸ್ತಾನ ಮೊದಲು ತನ್ನೊಳಗಿರುವ ಲಷ್ಕರ್​ ಎ ಸೈತಾನ್​ (ತೋಯ್ಬ), ಜೈಷ್​ ಎ ಸೈತಾನ್​ (ಮೊಹಮದ್​)ಗಳನ್ನು ಸದೆ ಬಡಿಯಲಿ ಎಂದು ಒತ್ತಾಯಿಸಿದ್ದಾರೆ.