ಪ್ರವಾಸಿಗರೇ… ಮೈ ಮರೆತರೆ ಅಪಾಯ

ಯಲ್ಲಾಪುರ: ಪ್ರವಾಸಿ ತಾಣಗಳು ಮೋಜು-ಮಸ್ತಿಗೆ ಎಷ್ಟು ಅನುಕೂಲಕರವೋ, ಅಷ್ಟೇ ಅಪಾಯಕಾರಿಯೂ ಹೌದು. ಅದರಲ್ಲೂ ಜಲಪಾತಗಳು ಮತ್ತಷ್ಟು ಅಪಾಯಕಾರಿ. ಅದನ್ನು ಅರಿತೂ ಮೈಮರೆಯುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿ ತಾಣ ಗಳಲ್ಲಿ ಸಾಯುವವರ ಸಂಖ್ಯೆ ಏರಿಕೆಯಾಗಿದೆ.

ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ ಎರಡು ದಿನಗಳ ಹಿಂದೆ ಮುಂಡಗೋಡಿನ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ. ಅತಿಯಾದ ಮಳೆಯಿಂದಾಗಿ ಜಲಪಾತ ರಭಸವಾಗಿ ಧುಮ್ಮಿಕ್ಕುತ್ತಿರುವುದರಿಂದ, ಯುವಕನ ಶವ ಜಲಪಾತದಿಂದ ಅರ್ಧ ಕಿ.ಮೀ. ಮುಂದೆ ತೇಲಿ ಹೋಗಿದೆ. ಸಾತೊಡ್ಡಿ ಜಲಪಾತದಲ್ಲಿ ವರ್ಷಕ್ಕೆ 3-4 ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಕಾನೂರು ಜಲಪಾತದ ಬಳಿ ಈಜಲೆಂದು ನೀರಿಗಿಳಿದ ಇಬ್ಬರು ಪ್ರವಾಸಿಗರು ಮುಳುಗಿ ಮೃತಪಟ್ಟಿದ್ದರು. ಶಿರಲೆ ಜಲಪಾತದಲ್ಲಿಯೂ ಪ್ರವಾಸಿಗನೊಬ್ಬ ಮೃತಪಟ್ಟಿದ್ದ.

ಪ್ರವಾಸಿ ತಾಣಗಳ ನಿರ್ವಹಣೆ ನೋಡಿಕೊಳ್ಳುವ ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳು ಆ ಪ್ರದೇಶದಲ್ಲಿ ಜಾಗೃತಿ ಫಲಕ ಹಾಕಿವೆ. ನೀರಿಗಿಳಿದರೆ ಉಂಟಾಗುವ ಅಪಾಯದ ಕುರಿತು ಅಲ್ಲಿರುವ ಸಿಬ್ಬಂದಿ ಪ್ರವಾಸಿಗರಿಗೆ ಮಾಹಿತಿ ನೀಡುತ್ತಾರೆ. ಇಷ್ಟಾಗಿಯೂ ಪ್ರವಾಸಿಗರು ಅದಕ್ಕೆ ಬೆಲೆ ಕೊಡದೇ ಮನಬಂದಂತೆ ವರ್ತಿಸುತ್ತಾರೆ. ಇದರಿಂದ ಅವಘಡಗಳು ಮಾತ್ರ ನಿಲ್ಲುತ್ತಿಲ್ಲ.

ಪ್ರವಾಸಿಗರಲ್ಲೇ ಅರಿವು ಮೂಡಬೇಕು: ಮಳೆಗಾಲ ದಲ್ಲಿ ಜಲಪಾತಗಳ ಬಳಿಯ ಕಲ್ಲುಬಂಡೆಗಳು ಜಾರುತ್ತವೆ. ಒಂದು ಬಂಡೆಗಲ್ಲಿನಿಂದ ಇನ್ನೊಂದು ಬಂಡಗಲ್ಲಿಗೆ ಜಿಗಿಯುವಾಗ ಕಾಲು ಜಾರಿ ಬೀಳುವ ಸಾಧ್ಯತೆಯಿರುತ್ತದೆ. ಕೆಲವರು ಮದ್ಯ ಹಾಗೂ ಮಾದಕ ವಸ್ತುಗಳೊಂದಿಗೆ ಬಂದು ಮೋಜು-ಮಸ್ತಿ ಮಾಡುತ್ತಾರೆ. ಕೆಲ ಪ್ರವಾಸಿಗರು ಹುಚ್ಚು ಧೈರ್ಯದಿಂದ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಾರೆ. ಜಲಪಾತಗಳು ದಟ್ಟ ಕಾನನದ ಮಧ್ಯೆ ಇರುವುದರಿಂದ ದುರಂತ ಸಂಭವಿಸಿದರೆ ತಕ್ಷಣ ಸಹಾಯಕ್ಕೆ ಬರುವುದು ಕಷ್ಟ. ಜಲಪಾತದ ಸೌಂದರ್ಯ ಆಸ್ವಾದಿಸಲು ಬರುವ ಪ್ರವಾಸಿಗರು ನೀರಿಗಿಳಿಯದಿದ್ದರೆ ಅಪಾಯ ಸಂಭವಿಸುವುದಿಲ್ಲ. ಈ ಕುರಿತು ಯಾರು ಎಷ್ಟೇ ಜಾಗೃತಿ ಮೂಡಿಸಿದರೂ ಪ್ರವಾಸಿಗರಲ್ಲೇ ಅರಿವು ಮೂಡದ ಹೊರತು ಪ್ರಯೋಜನವಿಲ್ಲ.

ಸಾತೊಡ್ಡಿಯಲ್ಲಿ ಪ್ರವಾಸಿಗನ ಶವ ಪತ್ತೆ: ಎರಡು ದಿನಗಳ ಹಿಂದೆ ಸಾತೊಡ್ಡಿ ಜಲಪಾತದಲ್ಲಿ ಸೆಲ್ಪೀ ಕ್ಲಿಕ್ಕಿಸಲು ಹೋಗಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದ ಪ್ರವಾಸಿಗನ ಶವ ಶುಕ್ರವಾರ ಪತ್ತೆಯಾಗಿದೆ.

ಮುಂಡಗೋಡ ಗಾಂಧಿನಗರದ ಮಹಮ್ಮದ ಯೂಸುಫ್ ಅಲ್ಲಾವು ದ್ದೀನ್ ಬಟ್ಟಿ (19) ಮೃತ ದುರ್ದೈವಿ.

ಬುಧವಾರ ಸಂಜೆ 14 ಜನ ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ಬಂದಿದ್ದ ಆತ ಸೆಲ್ಪೀ ಕ್ಲಕ್ಕಿಸುವಾಗ ಕಾಲು ಜಾರಿ ಬಿದ್ದು ಕಾಣೆಯಾಗಿದ್ದ. ವಿಷಯ ತಿಳಿ ಪೊಲೀಸರು ಆತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಸ್ಥಳೀಯರು ಗುರುವಾರದವರೆಗೂ ಹುಡುಕಿದರೂ ಪ್ರಯೋಜನವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಜಲಪಾತದಿಂದ ಅರ್ಧ ಕಿ.ಮೀ. ದೂರದಲ್ಲಿ ಕಾಳಿ ನದಿಯ ಹಿನ್ನೀರಿನಲ್ಲಿ ಶವ ತೇಲುತ್ತಿರುವುದು ಗೋಚರಿಸಿ, ಅದನ್ನು ಮೇಲಕ್ಕೆತ್ತಲಾಗಿದೆ. ಸಿಪಿಐ ಡಾ.ಮಂಜುನಾಥ ನಾಯಕ, ಪಿಎಸ್​ಐಗಳಾದ ಎಂ.ಎಸ್.ಹೂಗಾರ, ಎ.ವೈ.ಕಾಂಬಳೆ, ಅಗ್ನಿಶಾಮಕ ದಳದ ಭೀಮರಾವ ಉಪ್ಪಾರ, ನಂಜುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.