ಸಿಬಿಎಸ್​ಇ ಟಾಪರ್​ ಸಾಮೂಹಿಕ ಅತ್ಯಾಚಾರ: ನಮಗೆ ನ್ಯಾಯ ಬೇಕು, ಚೆಕ್​ ಬೇಡ ಎಂದ ಸಂತ್ರಸ್ತೆ ತಾಯಿ

ರೆವಾರಿ (ಹರಿಯಾಣ): ಸಿಬಿಎಸ್​ಇ ಟಾಪರ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ಸರ್ಕಾರ 2 ಲಕ್ಷ ರೂ. ಚೆಕ್​ ನೀಡಿದ್ದು, ಸಂತ್ರಸ್ತೆಯ ತಾಯಿ ಇದನ್ನು ನಿರಾಕರಿಸಿ, ‘ನಮಗೆ ದುಡ್ಡು ಬೇಡ, ನ್ಯಾಯ ಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂತ್ರಸ್ತೆಗೆ ನೀಡಿರುವ ಚೆಕ್​ ಮೇಲೆ ಮುಖ್ಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಕಾರ್ಯದರ್ಶಿಯ ಸಹಿ ಇರುವುದನ್ನು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆಯ ತಾಯಿ, ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾದ ನಂತರ ನನ್ನ ಪತಿಗೆ 2 ಲಕ್ಷ ರೂ. ಚೆಕ್​ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೂ ಮುಂಚೆ ಈ ಚೆಕ್​ನ್ನು ನಮಗೆ ನೀಡಿದ್ದರು. ನನ್ನ ಮಗಳು ಈಗಾಗಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವಳಿಗೆ ನ್ಯಾಯ ಒದಗಿಸುವುದರ ಬದಲಿಗೆ ದುಡ್ಡು ನೀಡಿದ್ದಾರೆ. ನಮಗೆ ನಿಮ್ಮ ಚೆಕ್​ ಬೇಡ. ನಮಗೆ ನ್ಯಾಯ ಬೇಕು. ಈ ಚೆಕ್​ನ್ನು ನಾವು ವಾಪಸ್​ ನೀಡುತ್ತಿದ್ದೇವೆ ಎಂದಿದ್ದಾರೆ. ​

ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿನಾ ಪೊಲೀಸರು ಪಂಕಜ್​, ಮನೀಶ್​ ಮತ್ತು ನಿಶು ಎಂಬ ಮೂವರು ಆರೋಪಿಗಳ ಚಿತ್ರವನ್ನು ಶನಿವಾರ ಬಿಡುಗಡೆ ಮಾಡಿದ್ದರು.

ಒಬ್ಬನ ಬಂಧನ
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ. ಈತ ಟ್ಯೂಬ್​ವೆಲ್​ ಮಾಲಿಕ ಎನ್ನಲಾಗಿದ್ದು, ಘಟನಾ ಸ್ಥಳವನ್ನು ಆರೋಪಿಗಳಿಗೆ ಬಾಡಿಗೆಗೆ ನೀಡಿದ್ದ ಎನ್ನಲಾಗಿದೆ.

ಆದರೆ ಭಾರತೀಯ ಸೇನೆಯ ಯೋಧ ಸೇರಿ ಪ್ರಕರಣದಲ್ಲಿ ಗುರುತಿಸಿರುವ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿರುವ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.

ಏನಿದು ಘಟನೆ?
ಹರಿಯಾಣದ ಮಹೇಂದರ್​ಗಡ ಜಿಲ್ಲೆಯ ಕನಿನಾದಲ್ಲಿ ಬುಧವಾರ(ಸೆ. 19) ಕಾರಿನಲ್ಲಿ ಬಂದ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರಸಿ ನಂತರ ಅದನ್ನು ಯುವತಿಗೆ ಬಲವಂತವಾಗಿ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆ ನಂತರ ಸಂತ್ರಸ್ತೆಯನ್ನು ಕನಿನಾದ ಬಸ್​ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದರು. (ಏಜೆನ್ಸೀಸ್​)

ರಾಷ್ಟ್ರಪತಿ ಗೌರವ ಸ್ವೀಕರಿಸಿದ್ದ ಸಿಬಿಎಸ್​ಇ ಟಾಪರ್​​ ಮೇಲೆ ಸಾಮೂಹಿಕ ಅತ್ಯಾಚಾರ!

Leave a Reply

Your email address will not be published. Required fields are marked *