ನಾನೂ ಶಾಸಕರ ಆಪರೇಷನ್​ ಮಾಡಬಲ್ಲೆ; ಆದರೆ, ಕಾನೂನಿಗೆ ತಲೆಬಾಗುವೆ

ಬೆಂಗಳೂರು: ಬಿಜೆಪಿ ಮಾಡಲು ಹೊರಟಿರುವ ಆಪರೇಷನ್​ಗೆ ಪ್ರತಿಯಾಗಿ ನಾನೂ ಕೂಡ ಆಪರೇಷನ್ ಆರಂಭಿಸಬಲ್ಲೆ. ಆದರೆ, ನಾವು ಕಾನೂನಿನ ಪ್ರಕಾರ ನಡೆಯಬೇಕು. ಆದ್ದರಿಂದ ಅಂಥ ಆಪರೇಷನ್​ ಆನ್ನು ಮಾಡಲಾರೆ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಗೆ ಎಚ್​ಡಿಕೆ ಈ ರೀತಿ ತಿರುಗೇಟು ನೀಡಿದರು.

“ನಾನು ಆಪರೇಷನ್​ ಆರಂಭಿಸಿದ್ದೇನೆ ಎಂದು ಹೇಳಿರುವ ಯಡಿಯೂರಪ್ಪ ಸುಳ್ಳು ಹೇಳುವುದನ್ನು ಮೊದಲು ಬಿಡಲಿ. ಮುಂಬೈನಲ್ಲಿ ಯಾವ್ಯಾವ ಬಿಜೆಪಿ ಶಾಸಕರ ಹೆಸರಲ್ಲಿ ಹೋಟೆಲ್​ಗಳಲ್ಲಿ ಕೊಠಡಿ ಬುಕ್​ ಆಗಿದೆ ಎಂಬುದು ನನಗೆ ಗೊತ್ತಿದೆ. ನನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಯಬೇಡಿ. ನನಗೆ ಎಲ್ಲ ಮಾಹಿತಿಯೂ ಇದೆ. ಆದರೆ, ನಾನು ಬಿಜೆಪಿ ಶಾಸಕರನ್ನು ಸಂಪರ್ಕ ಮಾಡಿಲ್ಲ,” ಎಂದು ತಿಳಿಸಿದರು.

“ನನ್ನ ಸರ್ಕಾರಕ್ಕೆ 120 ಶಾಸಕರ ಬೆಂಬಲವಿದೆ. ಯಾವ ಕಾಂಗ್ರೆಸ್ ಶಾಸಕರ ಫೋನ್​ಗಳೂ ನಾಟ್ ರೀಚೆಬೆಲ್ ಆಗಿಲ್ಲ. ಇಂದು ಬೆಳಗ್ಗೆಯಷ್ಟೇ ನಾನು ರಮೇಶ್ ಜಾರಕಿಹೊಳಿ, ನಾಗೇಂದ್ರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ,” ಎಂದರು.

ಅಲ್ಲದೆ, “ಈ ಹಿಂದೆ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ,” ಎಂದೂ ಟೀಕಿಸಿದರು.