ನಂಬಿಕೆಯ ದುರುಪಯೋಗ ಸಲ್ಲ

| ಕವಿತಾ ರಾವ್ ಕೃಷ್ಣಾಪುರದೊಡ್ಡಿ

ಅದು ವಸಂತಋತುವಿನ ಸಂಜೆಸಮಯ. ಸುತ್ತಲೂ ಹಸಿರನ್ನು ತುಳುಕಿಸುತ್ತಿರುವ ಬೆಟ್ಟಗುಡ್ಡಗಳ ಸಾಲು. ಹಕ್ಕಿಪಕ್ಷಿಗಳ ನಾದಲಹರಿ. ಪಶ್ಚಿಮದಂಚಿನಲ್ಲಿ ಹೊಂಗಿರಣಗಳ ಬೆರಗು. ಭುವಿಗೆ ಅಲ್ಲಲ್ಲಿ ಸ್ವರ್ಣಲೇಪನದ ಚಿತ್ತಾರ. ಅದರ ಮಧ್ಯೆ ಗಾಡಿಜಾಡಿನಷ್ಟು ಅಂಕುಡೊಂಕಾದ ಹಾದಿ. ದೂರದಲ್ಲೆಲ್ಲೋ ಕೇಳಿಬರುತ್ತಿರುವ ಕುದುರೆಯ ಖರಪುಟದ ಶಬ್ದ… ಆ ಪ್ರದೇಶದಲ್ಲಿ ಅಲ್ಲಲ್ಲಿ ಜನವಸತಿ ಹರಡಿಕೊಂಡಿದೆ. ಹೀಗೆ ಅಲ್ಲೊಂದು ಒಂಟಿಕುಟೀರ, ಅದರಲ್ಲೊಬ್ಬ ಸಾಧು. ಅವರು ತಮ್ಮ ಪ್ರೀತಿಯ ಕುದುರೆಯೇರಿ ಜನವಸತಿಗಳತ್ತ ಆಗೀಗ ಹೋಗಿಬರುತ್ತ ಅವರ ಬದುಕನ್ನು ಹಸನಾಗಿಸಲು ನೆರವಾಗುತ್ತಿದ್ದಾರೆ… ಅವರು ಕುದುರೆಯನ್ನು ಸಾಕಬೇಕೆಂದು ಸಾಕಿದವರಲ್ಲ; ತಬ್ಬಲಿ ಮರಿಕುದುರೆಯೊಂದು ಕಣ್ಣಿಗೆ ಬಿದ್ದು, ಕುಟೀರ ಸೇರಿ, ಈಗ ಪ್ರೌಢಾವಸ್ಥೆಯನ್ನು ತಲುಪಿದೆ. ಸಾಧು ಮತ್ತು ಕುದುರೆಯ ಸಂಬಂಧ ಅಚ್ಚರಿಮೂಡಿಸುವಷ್ಟು ಆಪ್ತವಾಗಿದೆ. ಅವರು ಹೀಗೆ ಕುದುರೆ ಸವಾರಿಯಲ್ಲಿ ತಲ್ಲೀನರಾಗಿರುವಾಗ ಸಮೀಪದಲ್ಲೇ, ಬಳಲಿದ ವ್ಯಕ್ತಿಯೊಬ್ಬ ‘ನೀರು… ನೀರು..’ ಎಂದು ಹಲುಬುತ್ತಿರುವುದು, ಸಂಕಟಪಡುತ್ತಿರುವುದು ಸಾಧುವಿಗೆ ಕೇಳಿಸಿತು. ಪರಿಸ್ಥಿತಿಯ ತೀವ್ರತೆ ಅರಿತ ಅವರು ತಕ್ಷಣ ಕುದುರೆಯಿಂದ ಕೆಳಗಿಳಿದವರೇ ನೀರಿಗಾಗಿ ಸುತ್ತಮುತ್ತಲೂ ಹುಡುಕಲಾರಂಭಿಸಿದರು, ಅತ್ತಿತ್ತ ಓಡತೊಡಗಿದರು. ಆದರೆ, ಬಳಲಿಕೆಯ ನಟನೆ ಮಾಡುತ್ತಿದ್ದವ ತಕ್ಷಣ ಆ ಕುದುರೆಯನ್ನೇರಿ ಹೊರಟ!

ಸಾಧುವಿಗೆ ಅವನ ದುರುದ್ದೇಶದ ಮನವರಿಕೆಯಾಗಿ ನಿಂತಲ್ಲಿಂದಲೇ- ‘ನಿಲ್ಲು, ನನಗೆ ಕುದುರೆ ಬೇಡ; ನೀನು ನೇರವಾಗಿ ಕೇಳಿದ್ದರೂ ಸಂತೋಷದಿಂದ ಕೊಡುತ್ತಿದ್ದೆ. ಕುದುರೆ ಖಂಡಿತ ನಿನ್ನದೇ. ಆದರೆ ಒಂದು ಮಾತನ್ನು ನೆನಪಲ್ಲಿಟ್ಟುಕೋ…’ ಎಂದು ಕೂಗಿ ಹೇಳಿದರು. ಕುತೂಹಲ ಗೊಂಡ ಆತ ಅದನ್ನು ಕೇಳಿಸಿಕೊಳ್ಳಲು ಹಾಗೇ ನಿಂತ.

ಮಾತು ಮುಂದುವರಿಸಿದ ಸಾಧು, ‘ಬಳಲಿಕೆಯ ನಾಟಕವಾಡಿ ಸಾಧುವಿನಿಂದ ಹೀಗೆ ಕುದುರೆಯನ್ನು ಕದ್ದೆ ಎಂದು ಮಾತ್ರ ಯಾರಲ್ಲೂ ಹೇಳಿಕೊಳ್ಳಬೇಡ. ಅದು ಗೊತ್ತಾದಲ್ಲಿ, ಮುಂದೊಮ್ಮೆ ಸಹಾಯಮಾಡುವುದಕ್ಕೇ ಜನ ಹಿಂದೆಗೆಯುತ್ತಾರೆ. ಹೀಗಾದಲ್ಲಿ, ನಿಜವಾದ ನೆರವಿನ ಅಗತ್ಯವಿದ್ದವರು ಅಸಹಾಯಕತೆಯಿಂದ ಬಳಲಬೇಕಾಗುತ್ತದೆ. ಅನೇನೇ ಇರಲಿ… ಹೋಗಿ ಬಾ ಮಗೂ, ನಿನಗೆ ಒಳ್ಳೆಯದಾಗಲಿ’ ಎಂದರು. ಕುದುರೆ ಕದ್ದವನು ಓರ್ವ ದರೋಡೆಕೋರನಾಗಿದ್ದು, ಸಾಧುವಿನ ನಡೆ-ನುಡಿಗಳು ಅವನಲ್ಲಿ ಹೊಸ ಅರಿವು ಮೂಡಿಸಿದವು. ಆ ಕ್ಷಣವೇ ಸಾಧುವಿನ ಬಳಿ ಬಂದು ಕಾಲಿಗೆರಗಿ ಅವರ ಶಿಷ್ಯನಾಗಿ ಬಾಳನ್ನು ಹಸನುಮಾಡಿಕೊಂಡ.

ನಂಬಿಸಿ ಮೋಸಗೊಳಿಸುವ ನೀಚತನ ತೀವ್ರವಾಗಿರುವ ಕಾರಣದಿಂದಾಗಿ ಯಾರನ್ನೂ ನಂಬದಂಥ ದುಸ್ಥಿತಿಗೆ ಇಂದು ತಲುಪಿದ್ದೇವೆ. ಅಪರಿಚಿತರಿರಲಿ, ಪರಿಚಿತರನ್ನೂ ನಂಬಲಾಗದಂಥ ‘ತ್ರಿಶಂಕುಸ್ಥಿತಿ’ ಸೃಷ್ಟಿಯಾಗಿದೆ. ಮೋಸ, ವಂಚನೆ, ದ್ರೋಹ, ಕೊಲೆ-ಸುಲಿಗೆ, ಅತ್ಯಾಚಾರ-ಅನಾಚಾರಗಳು ಎಷ್ಟೆಲ್ಲ ಒಳ್ಳೆಯ ಮುಖವಾಡಗಳನ್ನು ಹೊತ್ತು, ತಮ್ಮ ಪ್ರಾಬಲ್ಯವನ್ನು ಮೆರೆಸುತ್ತ ಗೆಲುವನ್ನು ಸಾಧಿಸುತ್ತಿವೆ. ಆದರೆ ಇಂಥ ಗೆಲುವು ಕ್ಷಣಿಕವೇ ಹೊರತು ಶಾಶ್ವತವಲ್ಲ ಎಂಬುದನ್ನು ಮರೆಯದಿರೋಣ, ವಾಮಮಾರ್ಗದಲ್ಲಿ ಹೆಜ್ಜೆಹಾಕದಿರೋಣ. ಈ ರೂಪಕದಲ್ಲಿ ಕಾಣಬರುವ ದರೋಡೆಕೋರನ ಕಣ್ಣುತೆರೆಸಿದ ಸಾಧುವಿನಂಥ, ಅಂಗುಲಿಮಾಲಾನಂಥ ಕಟುಕನಲ್ಲಿ ಜ್ಞಾನೋದಯಕ್ಕೆ ಕಾರಣನಾದ ಗೌತಮ ಬುದ್ಧನಂಥ ಮಾರ್ಗದರ್ಶಿಗಳ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ, ಅಲ್ಲವೇ?

(ಲೇಖಕಿ ಹವ್ಯಾಸಿ ಬರಹಗಾರ್ತಿ) (ಪ್ರತಿಕ್ರಿಯಿಸಿ: [email protected]))