ಇಂದು ಬಾನಂಗಳದಲ್ಲಿ ನೋಡಿ ಪೂರ್ಣಚಂದಿರನ ತ್ರಿವಳಿ ಅಚ್ಚರಿ

ಅಪರೂಪದ ಮತ್ತೊಂದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲು ವಿಶ್ವ ಸಜ್ಜಾಗಿದೆ. 36 ವರ್ಷದ ಬಳಿಕ ಬುಧವಾರ ಸಂಜೆ 6.18 ಹೊತ್ತಿಗೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. ಮೊದಲು ಕೆಂಪಾಗಿ ಗೋಚರಿಸಲಿರುವ ಚಂದ್ರ, ಗ್ರಹಣ ಸಂಪೂರ್ಣ ಅಂತ್ಯವಾಗುವ ವೇಳೆಗೆ ರಕ್ತವರ್ಣಕ್ಕೆ ತಿರುಗಲಿದ್ದಾನೆ. ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್​ನ 1 ತಿಂಗಳಲ್ಲಿ ಒಂದು ಹುಣ್ಣಿಮೆ ಒಂದು ಅಮಾವಾಸ್ಯೆ ಬರುತ್ತವೆ. ಕೆಲವೊಮ್ಮೆ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುತ್ತವೆ. ಇದು ತುಂಬಾ ಅಪರೂಪವಾದ್ದರಿಂದ ಇದನ್ನು ಬ್ಲೂಮೂನ್ ಎಂದೇ ಕರೆಯಲಾಗುತ್ತದೆ. ಪೂರ್ಣಚಂದ್ರನ ಕಣ್ತುಂಬಿಕೊಳ್ಳಲು ಕರ್ನಾಟಕ ಸೇರಿದಂತೆ ವಿಶ್ವದ ಹಲವೆಡೆ ಸಿದ್ಧತೆ ನಡೆದಿದೆ.

# ಆಗಸದಲ್ಲಿ ವರ್ಣಚಿತ್ತಾರ

ಗ್ರಹಣದ ವೇಳೆ ಚಂದ್ರ ಕೆಲ ಪ್ರದೇಶಗಳಲ್ಲಿ ಕಿತ್ತಳೆ ವರ್ಣದಲ್ಲಿ ಗೋಚರಿಸಿದರೆ ಮತ್ತೆ ಕೆಲವೆಡೆ ರಕ್ತವರ್ಣದಲ್ಲಿ ಕಾಣಿಸಲಿದ್ದಾನೆ.

# ಗ್ರಹಣ ಅವಧಿ

ರಾಜ್ಯದಲ್ಲಿ ಸಂಜೆ 6.19ಕ್ಕೆ ಆರಂಭವಾಗಲಿರುವ ಗ್ರಹಣ 8.42ರವರೆಗೆ ಇರಲಿದೆ.

# ಪ್ರಸಕ್ತ ವರ್ಷದ ಗ್ರಹಣ

1866ರ ಮಾರ್ಚ್ 31ರಂದು ಇಂಥದ್ದೇ ಅಪರೂಪದ ಚಂದ್ರಗ್ರಹಣ ಸಂಭವಿಸಿತ್ತು. ಪ್ರಸಕ್ತ ವರ್ಷದಲ್ಲಿ ಸಂಭವಿಸುತ್ತಿರುವ ಮೊದಲ ಗ್ರಹಣ ಇದಾಗಿದೆ.

# ಏನಿದು ಬ್ಲಡ್ ಮೂನ್

ಚಂದ್ರ ಭೂಮಿಯಿಂದ 3.84 ಲಕ್ಷ ಕಿಮೀ ದೂರದಲ್ಲಿದ್ದಾನೆ. ಜ.31ರಂದು ಭೂಮಿಗೆ 3,56,565 ಕಿ.ಮೀನಷ್ಟು ಸನಿಹ ಬರಲಿದ್ದಾನೆ. ಅಂದು ಗ್ರಹಣ ಘಟಿಸುತ್ತಿರುವುದರಿಂದ ಚಂದ್ರನ ಅಂಗಳ ಕಪ್ಪಾಗಿ ಕಾಣಿಸಲಿದೆ. ಆದರೆ ಈ ಬಾರಿ ಅದು ಕಿತ್ತಳೆ ಅಥವಾ ರಕ್ತವರ್ಣದಲ್ಲಿ ಕಾಣಿಸುವುದರಿಂದ ಬ್ಲಡ್​ವುೂನ್ ಎನ್ನಲಾಗುತ್ತದೆ.

# ಎಲ್ಲೆಲ್ಲಿ ಗೋಚರ

ಅಮೆರಿಕ, ಈಶಾನ್ಯ ಯುರೋಪ್, ರಷ್ಯಾ, ಏಷ್ಯಾ, ಹಿಂದು ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ ಮತ್ತಿತರ ಪ್ರದೇಶ

# ಚಂದ್ರ ಕುತೂಹಲ

ಸೂಪರ್ ಮೂನ್ ಬ್ಲೂ ಮೂನ್ ಬ್ಲಡ್ ಮೂನ್

2037ರಲ್ಲಿ ಇಂಥದ್ದೇ ಮತ್ತೊಂದು ಚಂದ್ರಗ್ರಹಣ ಗೋಚರ

ದೇಗುಲ ದರ್ಶನವಿಲ್ಲ

ಗ್ರಹಣ ಕಾರಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಹೊರನಾಡು ಅನ್ನಪೂರ್ಣೆಶ್ವರಿ ದೇಗುಲಗಳಲ್ಲಿ ಬುಧವಾರ ಮಧ್ಯಾಹ್ನದಿಂದ ರಾತ್ರಿ 9ರವರೆಗೆ ದೇವರ ದರ್ಶನ ಹಾಗೂ ಪೂಜಾ ಸೇವೆ ಸ್ಥಗಿತಗೊಳ್ಳಲಿದೆ.


ಇಂದು ಚಂದ್ರನಿಗೆ ಮೂರು ರಂಗು ಅತ್ಯಂತ ವಿರಳ ಖಗೋಳ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಇಂದು ನಡೆಯಲಿರುವ ಸಂಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರ ತ್ರಿವಳಿ ರಂಗಿನಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ, ಇಂದು ಗೋಚರಿಸುವ ಚಂದ್ರನನ್ನು ಸೂಪರ್ ಮೂನ್ ಎಂದೂ, ಬ್ಲಡ್ ಮೂನ್ ಎಂದೂ, ಬ್ಲೂ ಮೂನ್ ಎಂದೂ ಕರೆಯಲಾಗುತ್ತಿದೆ.

# ಸೂಪರ್ ಮೂನ್

ಚಂದ್ರ ಉಪಜ್ಯಾದ ಸಮೀಪದಲ್ಲಿರುವಾಗ ಅಥವಾ ಭೂಮಿಯ ಕಕ್ಷೆಗೆ ಸಮೀಪದಲ್ಲಿರುವಾಗ ದೊಡ್ಡ ಗಾತ್ರ(ಸೂಪರ್ ಮೂನ್)ದಲ್ಲಿ ಕಾಣಿಸುತ್ತಾನೆ.

# ಬ್ಲಡ್ ಮೂನ್

ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರ ಭೂಮಿಯ ನೆರಳಿನಲ್ಲಿದ್ದು, ಭೂಮಿ ಮೇಲೆ ಹಾದು ಹೋಗುವ ಸೂರ್ಯನ ಬೆಳಕು ಚದುರಿ ಚಂದ್ರನ ಮೇಲೆ ಬೀಳುವ ಕಾರಣ, ಚಂದ್ರ ರಕ್ತವರ್ಣ(ತಾಮ್ರ ವರ್ಣ ಎಂದೂ ಹೇಳುತ್ತಾರೆ) ಪಡೆಯುತ್ತಾನೆ.

# ಬ್ಲೂಮೂನ್

ಸಾಮಾನ್ಯವಾಗಿ ತಿಂಗಳ ಎರಡನೇ ಹುಣ್ಣಿಮೆಯಂದು ಗೋಚರಿಸುವ ಚಂದ್ರನನ್ನು ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ಆದರೆ, ಚಂದ್ರ ನೀಲಿಯಾಗಿ ಕಾಣಿಸುವುದಿಲ್ಲ.

ಚಂದ್ರಗ್ರಹಣ ಹೇಗಾಗುತ್ತದೆ ಸರಳವಾಗಿ ಹೇಳಬೇಕು ಎಂದರೆ ಭೂಮಿಯ ನೆರಳಿನಲ್ಲಿ ಚಂದ್ರ ಚಲಿಸಿದಾಗ ಚಂದ್ರಗ್ರಹಣ ಉಂಟಾಗುತ್ತದೆ. ಇನ್ನು ಖಗ್ರಾಸ ಚಂದ್ರಗ್ರಹಣದ ಬಗ್ಗೆ ಹೇಳುವುದಾದರೆ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯಲ್ಲಿ ಕಾಣಿಸಿಕೊಂಡಾಗ, ಅಂದು ಹುಣ್ಣಿಮೆಯಾಗಿದ್ದರೆ ಖಗ್ರಾಸ ಚಂದ್ರಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳನ್ನು ಎರಡು ರೀತಿ ವಿಂಗಡಿಸಬಹುದು. ಮೊದಲನೆಯದು ಪೂರ್ಣಛಾಯೆ ಅಥವಾ ಛಾಯಶಂಕು(ಅಂಬ್ರ), ಎರಡನೆಯದು ಅರೆನೆರಳಿನ ಛಾಯೆ(ಪೆನಂಬ್ರ).

# ಪ್ರತಿ ಹಂತದ ವಿವರಣೆ

ಭಾರತೀಯ ಕಾಲಮಾನ ಪ್ರಕಾರ, ಬುಧವಾರ (ಜ.31) ಸಂಜೆ 5.18ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸಲಿದ್ದಾನೆ. ಅಂದರೇ ಉದಯ ಕಾಲದಲ್ಲಿಯೇ ಚಂದ್ರ ಗ್ರಹಣಗ್ರಸ್ಥನಾಗಿರುತ್ತಾನೆ. ಸಂಜೆ 6.21ಕ್ಕೆ ಗ್ರಹಣದ ಪೂರ್ಣಾವಸ್ಥೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ಬಣ್ಣ ತಾಮ್ರವರ್ಣಕ್ಕೆ ತಿರುಗಲಾರಂಭಿಸುತ್ತದೆ. ರಾತ್ರಿ 7.38ಕ್ಕೆ ಗ್ರಹಣ ಮುಕ್ತಾಯ ಆಗಲಿದ್ದು, 8.42ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳಿನಿಂದ ಸಂಪೂರ್ಣವಾಗಿ ಹೊರಬರುತ್ತಾನೆ.

ಬರಿಗಣ್ಣಿನಲ್ಲಿ ವೀಕ್ಷಿಸಬಹುದು

ಗ್ರಹಣದ ನೇರ ವೀಕ್ಷಣೆಯಿಂದ ಕಣ್ಣುಗಳಿಗೆ ಯಾವುದೇ ರೀತಿಯ ಅಪಾಯವಾಗುವುದಿಲ್ಲ. ಪ್ರಕೃತಿಯ ಈ ಚಿತ್ತಾಕರ್ಷಕ ಬೆಳಕು, ನೆರಳಿನಾಟದ ಅಪರೂಪದ ಅಚ್ಚರಿಯನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಕಣ್ತುಂಬಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.

ಅರೆ ಛಾಯೆ

ಚಂದ್ರನ ಮೇಲೆ ಬೀಳದೇ ಇರುವ ಭೂಮಿಯ ಛಾಯೆ ಇದು.

ಛಾಯಾಶಂಕು

ಚಂದ್ರನ ಮೇಲೆ ನೇರವಾಗಿ ಬೀಳುವ ಭೂಮಿಯ ನೆರಳು.

 

ಪ್ರಮುಖ ದೇವಾಲಯಗಳಲ್ಲಿ ದೇವರ ದರ್ಶನ ಅವಧಿಯಲ್ಲಿ ಬದಲಾವಣೆ

ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 8ಕ್ಕೆ ಶ್ರೀಕೃಷ್ಣ ದೇವರ ಪೂಜೆ ಮುಗಿಯಲಿದೆ. ಸಾಯಂಕಾಲ 4.30ಕ್ಕೆ ರಾತ್ರಿ ಪೂಜೆ ನೆರವೇರಲಿದ್ದು, ರಥೋತ್ಸವ ಇಲ್ಲ. ಗ್ರಹಣ ದೋಷ ಪರಿಹಾರಕ್ಕಾಗಿ ಸಾಯಂಕಾಲ 6ಕ್ಕೆ ಸಾಮೂಹಿಕ ಗ್ರಹಣ ಶಾಂತಿ ಹೋಮ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆ ತನಕ ಮಾತ್ರ ದೇವರ ದರ್ಶನ ಇರುತ್ತದೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ- ಪುನಸ್ಕಾರ ನೆರವೇರಲಿದ್ದು, ಎಂದಿನಂತೆ ದೇವರ ದರ್ಶನ ಇರಲಿದೆ. ಆದರೆ, ಗ್ರಹಣದ ಸ್ಪರ್ಶಕಾಲವಾದ ಸಂಜೆ 6.30ರಿಂದ 7.30ರ ವರೆಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 11ರವರೆಗೆ ಮತ್ತು ಸಂಜೆ 5ರಿಂದ 8-45 ರವರೆಗೆ ಮಾತ್ರ ಪೂಜೆಗೆ ಅವಕಾಶವಿದೆ.

ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಯಲ್ಲಮ್ಮಗುಡ್ಡದಲ್ಲಿ ಬುಧವಾರ ಬೃಹತ್ ಜಾತ್ರೆ ನಡೆಯಲಿದ್ದು, ಚಂದ್ರಗ್ರಹಣ ನಿಮಿತ್ತ ರಾತ್ರಿ 9 ಗಂಟೆ ನಂತರ ಪೂಜೆ-ಪುನಸ್ಕಾರಗಳು ಜರುಗಲಿವೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣ ಗಾಪುರದ ಶ್ರೀ ದತ್ತಾತ್ರೇಯ ಸನ್ನಿಧಾನ ಹಾಗೂ ಚಿತ್ತಾಪುರ ತಾಲೂಕಿನ ಸನ್ನತಿ ಚಂದ್ರಲಾ ಪರಮೇಶ್ವರ ದೇವಸ್ಥಾನ ಹಾಗೂ ಸೇಡಂ ತಾಲೂಕಿನ ಮಳಖೇಡದ ಶ್ರೀ ಜಯತೀರ್ಥರ ಸನ್ನಿಧಾನದಲ್ಲಿ ಗ್ರಹಣ ಮೋಕ್ಷ ನಂತರ ಪೂಜೆ, ನೈವೇದ್ಯ, ಹಸ್ತೋದಕ ನೆರವೇರಲಿದೆ. ಇಡೀ ದಿನ ದೇವರ ದರ್ಶನ, ಪೂಜೆ ಇರುವುದಿಲ್ಲ.

Leave a Reply

Your email address will not be published. Required fields are marked *