ಶಿರಸಿ: ಅತಿಯಾದ ಹಳೆಯ ಕಟ್ಟು ಪಾಡುಗಳಿಗೆ ಗಂಟು ಬಿದ್ದು ಈ ಸಮಾಜದ ಉನ್ನತಿಗೆ ನಾವೇ ತೊಡಕಾಗುತ್ತಿದ್ದೇವೇನೋ ಎನ್ನುವ ಭಾವನೆ ಕಾಡುತ್ತಿದೆ ಎಂದು ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚಾತುರ್ಮಾಸ್ಯ ಪೂಜೆ ನಂತರ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಹಿರಿಯರು ಹಾಕಿಕೊಟ್ಟ ಕಟ್ಟು ಪಾಡುಗಳಿಗೆ ಒಂದು ಅರ್ಥ ಇತ್ತು. ಅದನ್ನು ಪಾಲಿಸುವುದರಿಂದ ಮನೆತನ ಅಭಿವೃದ್ಧಿ, ಸಮಾಜದ ಅಭಿವೃದ್ಧಿ ಕಾಣುತ್ತಿದ್ದೆವು. ಅದೇ ಈಗ ಹಳೆಯ ಕಟ್ಟು ಪಾಡುಗಳನ್ನು ಅತಿಶಯ ಮಾಡಿ ಸಮಾಜದ ಅಭಿವೃದ್ಧಿಗೆ ನಾವೇ ತೊಡಕಾಗುತ್ತಿದ್ದೇವೆ. ಅದು ಆಗಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರಗಳಿಂದ ಸಮಾಜದ ಅಭಿವೃದ್ಧಿ ಆಗಬೇಕು, ಅದೇ ತೊಡಕಾಗಬಾರದು ಎಂದರು.
ಇತ್ತೀಚೆಗೆ ಅಂಧಾನುಕರಣೆ ಜೋರಾಗಿದೆ, ಅದು ಯಾರು ಹೇಳಿದರೋ, ಹೇಗೆ ಬಂತೋ, ಎಲ್ಲ ವಿಚಿತ್ರವಾಗಿ ಕಾಣುತ್ತಿದೆ. ಒಬ್ಬರು ಮಾಡಿದರೆಂದು ಮತ್ತೊಬ್ಬ, ಅವರು ಮಾಡಿದರೆಂದು ಇನ್ನೊಬ್ಬ. ಸಂಸ್ಕೃತಿ, ಸಂಸ್ಕಾರದಲ್ಲಿ ದೇವರನ್ನು ಕಾಣಬಹುದು. ಹಾಗಾಗಿ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ಹಾಗೆಂದು ಅಂಧಾನುಕರಣೆ ಸಲ್ಲ. ಶವಯಾತ್ರೆಯಂಥ ಪವಿತ್ರ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಿ ಸೇರಿ, ಆ ಶರೀರಕ್ಕೆ ಮುಕ್ತಿ ನೀಡಬೇಕು. ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು ಎನ್ನುವ ಮೂರ್ಖತನ ಬೇಡ. ಅತಿಯಾದ ಅಂಧಾನುಕರಣೆ ದುರಂತಕ್ಕೆ ಹಾದಿ ಮಾಡುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.