ಧೋನಿ ಕೀಪಿಂಗ್​ ಮಾಡುವಾಗ ಕ್ರೀಸ್​ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್​ಮನ್​ಗಳಿಗೆ ಐಸಿಸಿ ಎಚ್ಚರಿಕೆ

ನವದೆಹಲಿ: ಉತ್ತಮ ಗೇಮ್​ ಫಿನಿಶರ್​ ಎಂದು ಕರೆಸಿಕೊಂಡಿರುವ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್​ ಕ್ಯಾಪ್ಟನ್ ಖ್ಯಾತಿಯ​ ಮಹೇಂದ್ರ ಸಿಂಗ್​ ಧೋನಿ ಅವರು ವಿಕೆಟ್​ ಹಿಂದೆಯೂ ಚಾಣಾಕ್ಷ ಆಟಗಾರ.

ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಅವರು ಬ್ಯಾಟಿಂಗ್​ ಹಾಗೂ ಕೀಪಿಂಗ್​ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಿವೀಸ್​ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಿಗೆ ಲಭ್ಯರಾಗಿದ್ದ ಧೋನಿ ಅವರು ನಾಲ್ಕನೇ ಪಂದ್ಯಕ್ಕೆ ಗಾಯದ ಕಾರಣದಿಂದಾಗಿ ಅಲಭ್ಯರಾಗಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿತ್ತು. ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಕಮ್​ ಬ್ಯಾಕ್​ ಮಾಡಿದ ಧೋನಿ ಅವರು ಬ್ಯಾಟಿಂಗ್​ನಲ್ಲಿ ವಿಫಲವಾದರೂ ಕೂಡ ಕೀಪಿಂಗ್​ನಲ್ಲಿ ಯಶಸ್ವಿಯಾಗಿದ್ದರು.

ವೆಲ್ಲಿಂಗ್ಟನ್​​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 252 ರನ್​ ಗುರಿ ಬೆನ್ನತ್ತಿದ್ದ ಕಿವೀಸ್​ ತಂಡಕ್ಕೆ ಧೋನಿ ಆಘಾತ ನೀಡಿದರು. 44 ರನ್​ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಜಿಮ್ಮಿ ನಿಶಾಮ್​ ಅವರನ್ನು ಸ್ಟಂಪ್​ ಔಟ್​ ಮಾಡುವ ಮೂಲಕ ಕಿವೀಸ್​ ರನ್​ ವೇಗಕ್ಕೆ ಕಡಿವಾಣ ಹಾಕಿದ್ದರು.

ಧೋನಿ ಅವರ ಸ್ಟಂಪ್​ ವೇಗಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ), ಧೋನಿ ಅವರು ವಿಕೆಟ್​ ಹಿಂದೆ ಇರುವಾಗ ಯಾರು ಕ್ರೀಸ್​ ಬಿಟ್ಟು ಮುಂದೆ ಹೋಗಿ ಹೊಡೆಯುವ ಧೈರ್ಯ ಮಾಡಬೇಡಿ ಎಂದು ಎಲ್ಲ ಬ್ಯಾಟ್ಸ್​ಮನ್​ಗಳಿಗೆ ಎಚ್ಚರಿಕೆ ನೀಡುವ ಮೂಲಕ ವಿಶೇಷವಾಗಿ ಟ್ವೀಟ್​ ಮಾಡಿ ಶುಭಕೋರಿದೆ.

ಐದನೇ ಏಕದಿನ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ ಟೀಂ ಇಂಡಿಯಾ 4-1 ಅಂತರದಲ್ಲಿ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು. (ಏಜೆನ್ಸೀಸ್​)