ಆಫ್ಘನ್ ಗ್ರಂಥಾಲಯಕ್ಕೆ ಮೋದಿ ನೀಡಿರುವ ಅನುದಾನ ಅನುಪಯುಕ್ತ: ಡೊನಾಲ್ಡ್​ ಟ್ರಂಪ್​

ವಾಷಿಂಗ್ಟನ್​: ಅಫ್ಘಾನಿಸ್ತಾನ ಗ್ರಂಥಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಅನುದಾನ ಪ್ರಯೋಜನಕ್ಕೆ ಬಾರದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವ್ಯಂಗ್ಯವಾಡಿದ್ದಾರೆ.

ಕ್ಯಾಬಿನೆಟ್​ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್​ ಆಫ್ಘನ್​ಗೆ ಭಾರತ ನೀಡಿದ ನೆರವಿನ ವಿಷಯವನ್ನು ಪ್ರಸ್ತಾಪ ಮಾಡಿ, ಸಾಗರೋತ್ತರ ದೇಶಗಳಲ್ಲಿನ ಅಮೆರಿಕದ ಕಡಿಮೆ ಹೂಡಿಕೆ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಗ್ರಂಥಾಲಯ ಕಟ್ಟಿಸಿರುವುದನ್ನು ಪ್ರಧಾನಿ ಮೋದಿ ಅವರು ನಿರಂತರವಾಗಿ ನನಗೆ ಹೇಳುತ್ತಿರುತ್ತಾರೆ. ಇದಕ್ಕೆ ನಾವು ಧನ್ಯವಾದಗಳನಷ್ಟೇ ಹೇಳಬಹುದು. ಆದರೆ, ಇದನ್ನು ಯಾರು ಬಳಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಮೋದಿ ಅವರು ಯಾವ ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂಬುದು ಅಸ್ಪಷ್ಟವಾಗಿದೆ. ಆದರೆ, ಸೆಪ್ಟೆಂಬರ್​ 11, 2001ರ ದಾಳಿಯ ನಂತರ ಅಮೆರಿಕ ಪಡೆಗಳು ತಾಲಿಬಾನ್ ಆಡಳಿತವನ್ನು ಹೊಡೆದುರುಳಿಸಿದ ದಿನದಿಂದ ಭಾರತ ಅಫ್ಘಾನಿಸ್ತಾನಕ್ಕೆ 3 ಬಿಲಿಯನ್​ ಡಾಲರ್​ ನೆರವು ನೀಡಿದೆ ಎಂದು ಟ್ರಂಪ್​ ತಿಳಿಸಿದ್ದಾರೆ.

ಕಾಬೂಲ್​ನಲ್ಲಿ ಹೈಸ್ಕೂಲ್​ಗಳನ್ನು ಮರು ನಿರ್ಮಾಣ ಮಾಡುವುದು ಹಾಗೂ ಪ್ರತಿ ವರ್ಷ 1000 ಆಫ್ಘನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಭಾರತದ ಯೋಜನೆಯಲ್ಲಿದೆ.

ಆಫ್ಘನ್ ಸಂಸತ್ತು ಮರು ನಿರ್ಮಾಣಕ್ಕೆ ಭಾರತ ಹಣಕಾಸು ನೀಡಿದ ನಂತರ 2015ರಲ್ಲಿ ಸಂಸತ್ತು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಆಧುನಿಕ ಶಿಕ್ಷಣ ಮತ್ತು ವೃತ್ತಿಪರ ಕೌಶಲಗಳ ಮೂಲಕ ಆಫ್ಘನ್ ಯುವಕರನ್ನು ಶಸಕ್ತಗೊಳಿಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದಾಗಿ ಭರವಸೆ ನೀಡಿದ್ದರು ಎಂದು ಟ್ರಂಪ್​ ಭಾರತದ ಕ್ರಮವನ್ನು ಖಂಡಿಸಿದ್ದಾರೆ.(ಏಜೆನ್ಸೀಸ್​)