ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ, ಮೋದಿ ಅಜೇಯರಲ್ಲ ಎಂದು ಟಾಂಗ್‌

ರಾಯ್‌ಬರೇಲಿ: ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರಿಂದು ರಾಯ್‌ಬರೇಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅಜೇಯರಲ್ಲ ಎಂದು ಹೇಳಿದರು.

ನಾಮಪತ್ರ ಸಲ್ಲಿಸಿದ ಬಳಿಕ ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2004ನ್ನು ಮರೆಯದಿರಿ, ಬಿಜೆಪಿಯು ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಮಾಧ್ಯಮಗಳ ಭವಿಷ್ಯದ ನಡುವೆಯೇ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದೇ ತೀರುತ್ತದೆ ಎಂದು ಹೇಳಿದರು.

ಪುತ್ರ ರಾಹುಲ್‌ ಗಾಂಧಿ ಅವರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣೆ ಕಚೇರಿ ಎದುರು ಪ್ರಧಾನಿ ಮೋದಿಗೆ ಸೋಲಿಲ್ಲ ಎಂದು ನೀವು ಯೋಚಿಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸಾಧ್ಯವಿಲ್ಲ, ಅದು ಸಾಧ್ಯವಿಲ್ಲ. 2004ನ್ನು ಮರೆಯದಿರಿ. 2004ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕೂಡ ಅಜೇಯರಾಗಿಯೇ ಇದ್ದರು. ಆದರೂ ನಾವು ವಿಜಯ ಸಾಧಿಸಿದೆವು ಎಂದು ಹೇಳಿ ಹೊರಟರು.

ಬಳಿಕ ರಾಹುಲ್‌ ಗಾಂಧಿ ಮಾತನಾಡಿ, ಇತಿಹಾಸದಲ್ಲಿ ಹಲವಾರು ವ್ಯಕ್ತಿಗಳು ಮರೆಯಾಗಿದ್ದಾರೆ. ಸೊಕ್ಕಿನಿಂದಲೇ ಅಜೇಯರಾಗಿ ಉಳಿಯಬಹುದೆಂದು ಅವರು ನಂಬಿದ್ದಾರೆ. ಮತ್ತು ದೇಶದ ಜನತೆಗಿಂತಲೂ ದೊಡ್ಡವರೆಂದು ಅಂದುಕೊಂಡಿದ್ದಾರೆ. ಆದರೆ, ಜನರಿಗಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಅವರು ಅರಿತಿಲ್ಲ. ಪ್ರಧಾನಿ ಮೋದಿಯವರು ಸೋಲು ಈ ಚುನಾವಣೆಯಲ್ಲಿ ಕಾಣಿಸುತ್ತದೆ ಎಂದರು. (ಏಜೆನ್ಸೀಸ್)