ಗುಳೇದಗುಡ್ಡ: ವಿಕಲಚೇತನ ಮಕ್ಕಳನ್ನು ಹೆತ್ತಿದ್ದೇವೆ ಎಂದು ಪಾಲಕರು ಖಿನ್ನತೆಗೆ ಒಳಗಾಗಬೇಡಿ. ಮಕ್ಕಳ ಶಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಪಾಲಕರ ಪಾತ್ರ ಮಹತ್ತರವಾಗಿದೆ. ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಹೇಳಿದರು.

ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲೆ) ಹಮ್ಮಿಕೊಂಡಿದ್ದ ಗುಳೇದಗುಡ್ಡ ವಲಯದ ವಿಕಲಚೇತನ ಮಕ್ಕಳ ಪಾಲಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಾರಿಗೆ, ಬೆಂಗಾವಲು, ಹೆಣ್ಣು ಮಕ್ಕಳ ಪ್ರೋತ್ಸಾಹ ಧನ ಭತ್ಯೆ, ಅಂಧರಿಗೆ ಓದುಗರ ಭತ್ಯೆ ಹಾಗೂ ಫಿಜಿಯೋಥೆರಪಿ ಸೇವೆ, ಅರ್ಹ ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ ದಿನನಿತ್ಯ ಶಾಲೆಗೆ ಕಳುಹಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಎಂ.ಸಿ. ಮುದಕವಿ ಮಾತನಾಡಿ, ವಿಕಲಚೇತನ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯ ವಿನಾಯಿತಿ ಇದೆ. ಈ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಸಮನ್ವಯ ಶಿಕ್ಷಣ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು. ಬಿಐಇಆರ್‌ಟಿ ಎನ್.ಡಿ. ಬೀಳಗಿ, ಎಸ್.ಎಸ್. ಚೌಕದ, ಎಚ್.ಆರ್. ಕಡಿವಾಲ, ವಿ.ಎಚ್. ಮಡಿವಾಳರ, ಸಮೂಹ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಬಾಪಟ, ರಾಜಶೇಖರ ಹುನಗುಂದ, ಜಗದೀಶ ಬುಳ್ಳಾ, ಭಾಗೀರಥಿ ಆಲೂರ ಮತ್ತಿತರರಿದ್ದರು.
ಬಿಐಇಆರ್‌ಟಿ ಎನ್.ಡಿ. ಬೀಳಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಬಿಐಇಆರ್‌ಟಿ ಎಸ್.ಎಸ್. ಚೌಕದ ಕಾರ್ಯಕ್ರಮ ನಿರ್ವಹಿಸಿದರು.