ಮಹಾಲಿಂಗಪುರ: ಗ್ರಾಮ ವಾಸ್ತವ್ಯದ ಮೂಲಕ ಅಕ್ರಮ ಚಟುವಟಿಕೆ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ಸಮೀಪದ ಮದಭಾವಿ ಗ್ರಾಮದಲ್ಲಿ ಆಯೋಜಿಸಿರು ಗ್ರಾಮ ವಾಸ್ತವ್ಯದಲ್ಲಿ ಶುಕ್ರವಾರ ಮದಭಾವಿ, ಮಾರಾಪೂರ, ಸಂಗಾನಟ್ಟಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿನ ಸಮಸ್ಯೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಮದಲ್ಲಿ ಯವುದೇ ಕಾನೂನು ವಿರೋಧಿ ಚಟುವಟಿಕೆಗಳು ಕಂಡು ಬಂದರೆ ನಂ.112ಗೆ ಕರೆ ಮಾಡಿ ಮಾಹಿತಿ ನೀಡಿ. ಪ್ರತಿಯೊಬ್ಬರೂ ಪೊಲೀಸ್ ಇದ್ದ ಹಾಗೆ. ಎಲ್ಲೆಡೆ ಶಾಂತಿ ನೆಲೆಸಲು ಎಲ್ಲರೂ ಸಹಕಾರ ನೀಡಿ ಎಂದರು.
ಮಕ್ಕಳನ್ನು ಬಾಲ್ಯ ವಿವಾಹ ಕೂಪಕ್ಕೆ ದೂಡದೇ ಶಿಕ್ಷಣ ನೀಡಬೇಕು. ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಹಾಕಿ. ಕಾರು ಚಾಲಕರು ಸೀಟ್‌ಬೆಲ್ಟ್ ಹಾಕಿ ನಿಮ್ಮ ಪ್ರಾಣ ಉಳಿಸಿಕೊಳ್ಳಿ. ದುಡ್ಡಿನ ಆಸೆಗೆ ಆನ್‌ಲೈನ್ ವಂಚಕರ ಬಲೆಗೆ ಬೀಳದಿರಿ ಎಂದು ಸಲಹೆ ನೀಡಿದರು.
ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ಪೊಲೀಸ್ ಠಾಣೆಗೆ ಬರಲು ಹಿಂದೇಟು ಹಾಕುವವರ ಮನೆಗಳಿಗೆ ತೆರಳಿ, ಅವರ ಸಮಸ್ಯೆ ಆಲಿಸಿ ಪರಿಹಾರ ಪಡೆಯುವುದು ಗ್ರಾಮ ವಾಸ್ತವ್ಯದ ಉದ್ದೇಶ ಎಂದರು.
ಮುಖಂಡ ಮಹಾದೇವ ಮೇಟಿ ಮಾತನಾಡಿ, ದ್ವಿಚಕ್ರವಾಹನ ಸವಾರರಿಗೆ ಕಡ್ಡಾಯವಾಗಿ ಲೈಸನ್ಸ್ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಸರ್ಕಾರದ ವತಿಯಿಂದ ಮಹಾಲಿಂಗಪುರ ಪಟ್ಟಣದಲ್ಲಿ ಕ್ಯಾಂಪ್ ಮಾಡಿ ಲೈಸನ್ಸ್ ನೀಡಬೇಕು ಎಂದರು.
ಮೀರಾ ತಟಗಾರ ಮಾತನಾಡಿ, ಮಾರ್ಗಗಳಿಗೆ ನಾಮಲಕ ಅಳವಡಿಸಬೇಕು ಎಂದರು.
ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ ಕಿರಣ ಸತ್ತಿಗೇರಿ, ಮಹಿಳಾ ಪಿಎಸ್‌ಐ ಮಧು ಎಲ್., ಮುಖಂಡರಾದ ಅಣ್ಣೇಶಗೌಡ ಉಳ್ಳಾಗಡ್ಡಿ, ವಿನೋದ ಉಳ್ಳಾಗಡ್ಡಿ, ಮಹ್ಮದ್ ಹೂಲಿಕಟ್ಟಿ, ಲಗಮಣ್ಣ ಮಾದರ, ನಾಗಪ್ಪ ಡುಮ್ಮಣ್ಣವರ, ಜಯಶ್ರೀ ತಿಮ್ಮಾಪುರ, ಹನಮಂತ ಮಾದರ, ವಿಠ್ಠಲ ಮುಧೋಳ, ಬಸವರಾಜ ಘಂಟಿ, ನಾಗಯ್ಯ ಮಠಪತಿ, ಸಿದ್ದಪ್ಪ ಜೈನರ, ಮುತ್ತಪ್ಪ ಕೋಲುರ, ಎಂ.ಎಂ. ಮಠ ಇದ್ದರು. ರವಿ ಕಲ್ಲೋಳಿ ನಿರೂಪಿಸಿದರು.