More

    ಎಷ್ಟೇ ಲಾಭ ಇದ್ದರೂ ಸಂಬಂಧಿಕರಲ್ಲಿ ವ್ಯವಹಾರ ಸಲ್ಲ..

    ಎಷ್ಟೇ ಲಾಭ ಇದ್ದರೂ ಸಂಬಂಧಿಕರಲ್ಲಿ ವ್ಯವಹಾರ ಸಲ್ಲ..ನಂದು ‘ಉದಯ್ಸ್​ ಮ್ಯಾಜಿಕ್ ವರ್ಲ್ಡ್​​’ ಅಂತ ಎಕ್ಸ್​ಪೋರ್ಟ್ ಕಂಪನಿ ಬ್ಯಾಟರಾಯನಪುರದಲ್ಲಿದೆ. ನನ್ನ ಹತ್ತಿರದ ಸಂಬಂಧಿಯೊಬ್ಬರು ಚಾರ್ಟರ್ಡ್ ಅಕೌಂಟೆಂಟ್. ನನ್ನ ಕಂಪನಿಯ ಲೆಕ್ಕಪತ್ರಗಳ ಆಡಿಟಿಂಗ್ ಅವರಿಗೆ ಕೊಟ್ಟಿದ್ದೆ. ಪ್ರಾರಂಭದಲ್ಲಿ ವರ್ಷಕ್ಕೆ ಐದು ಸಾವಿರ ಫೀಸ್ ತಗೋತಿದ್ದರು. ಬರಬರುತ್ತ ಅದನ್ನು ಏರಿಸುತ್ತ ಹೋಗಿ ಅರುವತ್ತೆರಡು ಸಾವಿರ ರೂಪಾಯಿ ಚಾರ್ಜ್ ಮಾಡೋದಕ್ಕೆ ಶುರುಮಾಡಿದ್ರು. ಇರಲಿ ಅಂತ ನಾನೂ ಸುಮ್ಮನೇ ಇದ್ದೆ. ದಿನಕ್ಕೆ ಹದಿನೆಂಟು ಗಂಟೆ ದುಡೀತಿದ್ದೆ. ಇದನ್ನು ಗಮನಿಸಿದ ನನ್ನಪ್ಪ ಒಂದು ದಿನ, ‘ಬಾರೋ ಇಲ್ಲಿ, ನೀನು ಕೂಡಿಟ್ಟ ದುಡ್ಡನ್ನು ಈ ಜನ್ಮದಲ್ಲೇ ತಿಂದು ಖಾಲಿ ಮಾಡ್ತೀಯೇನೋ?’ ಅಂತ ಕೇಳಿದ್ರು. ‘ಅದು ಹೇಗಾಗುತ್ತೆ ಅಪ್ಪಾ?’ ಅಂತ ಅಂದೆ. ‘ಮತ್ತಾ್ಯಕೆ ಬಿಟ್ಟು ಹೋಗೋ ದುಡ್ಡಿಗೆ ಇಷ್ಟು ಕಷ್ಟಪಡ್ತಾ ಇದ್ದೀಯಾ? ಸಾಕು ನಿಲ್ಸು. ಈ ದುಡ್ಡಿನ ಆಸೆ ಮುಗಿಯದಿರೋ ಆಸೆ, ಅದ್ರ ಹಿಂದೆ ಹೋದೋರು ಯಾರೂ ಉದ್ಧಾರ ಆಗಿಲ್ಲಾ. ಏನ್ಮಾಡ್ತೀಯಾ?’ ಅಂತ ಕೇಳಿದ್ರು. ಅವರಿಂದ ತಪ್ಪಿಸಿಕೊಳ್ಳಲು ನಾನು ‘ಮಕ್ಳಿಗೋಸ್ಕರ ಮಾಡಿ ಇಡ್ತೀನಿ’ ಅಂದೆ. ಅದಕ್ಕವರು ‘ಇದು ಶುದ್ಧ ಬೊಗಳೆ. ಎಲ್ಲಾರೂ ಅವರವರ ಸ್ವಂತಕ್ಕೆ ಮಾಡೋದು. ಹೇಳೋದು ಮಾತ್ರ ಹೆಂಡತಿ-ಮಕ್ಳಿಗೆ ಅಂತ. ದುಡ್ಡು ಮಾಡೋದು ಹುಲಿಸವಾರಿ ಮಾಡಿದಂತೆ, ಒಮ್ಮೆ ಹತ್ತಿದ್ರೆ ಇಳಿಯೊಕ್ಕೆ ಆಗೋಲ್ಲ. ಅದಿರ್ಲಿ, ಮಕ್ಳಿಗೆ ನಿನ್ ದುಡ್ಡು ಬೇಕಾ ಅಂತ ಕೇಳಿ ನೋಡು’ ಅಂದ್ರು. ದೊಡ್ಡ ಮಗಳು ಸಹನಾ ಎಂಬಿಎ ಮಾಡಿ ಸ್ವೀಡನ್​ನಲ್ಲಿ ಸೆಟ್ಲ್ ಆಗಿದ್ದಾಳೆ. ಒಳ್ಳೆಯ ನೌಕರಿ ಇದೆ. ಆಕೆಯನ್ನು ಕೇಳಿದಾಗ ‘ಅಯ್ಯೋ ಬೇಡಪ್ಪಾ, ನೀವು ತುಂಬ ಕಷ್ಟ ಪಟ್ಟು ಸಂಪಾದನೆ ಮಾಡಿರೋ ದುಡ್ಡು, ಅದನ್ನ ನೀವೇ ಖರ್ಚು ಮಾಡಿ’ ಅಂದ್ಲು. ಚಿಕ್ಕವಳು ಸೋನಿಯಾ, ಡಾಕ್ಟರ್. ಅವ್ಳು ಕೂಡ ‘ನಿಮ್ಮ ದುಡ್ಡು ನಿಮಗೇ ಇರಲಿ ಅಪ್ಪಾ’ ಅಂತ ಅಂದ್ಲು. ಇದನ್ನು ಕೇಳಿ ನನಗೆ ಕಣ್ಣಲ್ಲಿ ನೀರು ಬರೋದೊಂದೇ ಬಾಕಿ.

    ‘ಸ್ಲಂಗಳಿಂದ ಜನರನ್ನಾ ಕರೆತಂದು ಅವರಿಗೆ ಟ್ರೖೆನಿಂಗ್ ಕೊಟ್ಟು ಕೆಲ್ಸ ಕೊಟ್ಟಿದ್ದೀನಿ. ದಿನಾ ಅವರೊಟ್ಟಿಗೆ ಕೂತು ಬರೆಯೋದನ್ನಾ, ಓದೋದನ್ನಾ, ನೀತಿಕಥೆ, ಜೀವನದಲ್ಲಿ ಗೆಲ್ಲೋದು ಹೇಗೆ ಎಂದೆಲ್ಲ ಹೇಳಿಕೊಟ್ಟಿದ್ದೀನಿ. ನಾನು ಫ್ಯಾಕ್ಟರಿ ಮುಚ್ಚಿದ್ರೆ ಇರೋ ನೂರು ಕೆಲಸಗಾರರಿಗೆ ಕಷ್ಟ ಆಗೋಲ್ವಾ ಅಪ್ಪಾ?’ ಅಂತ ಕೇಳಿದೆ. ಅದಕ್ಕವರು ‘ಈ ಜಗತ್ತು ನಡೆಯೋದು ನಮ್ಮಿಂದಾನೇ ಅಂತ ಅಂದ್ಕೊಂಡ್ರೆ ಅದು ತಪು್ಪ. ನಿನ್ನ ಕೆಲಸದವ್ರಿಗೆ ಅವ್ರೇ ನಿನ್ನನ್ನು ಉದ್ಧಾರ ಮಾಡ್ತಾ ಇರೋದು ಅನ್ನೋ ಫೀಲಿಂಗ್ ಇರುತ್ತೆ. ಅದಕ್ಕೆ ವರ್ಕರ್ಸ್ ಮೆಂಟಾಲಿಟಿ ಅಂತಾರೆ. ಆದ್ರಿಂದ ನೀನು ಬೇರೆಯವರಿಗೋಸ್ಕರ ಮಾಡ್ತಿದ್ದೀಯಾ ಅನ್ನೋದು ಎಲ್ಲ ಸುಳ್ಳು. ನೀನು ದುಡ್ಡಿನ ಆಸೆಗೆ ಬಿದ್ದು ಅದರ ಹಿಂದೆ ಓಡ್ತಿದ್ದೀಯಾ ಅನ್ನೋದು ಮಾತ್ರ ಸತ್ಯ’ ಅಂತ ಬುದ್ಧಿ ಹೇಳಿದ್ರು. ‘ಸರಿ, ಹಾಗಾದ್ರೆ ನಾನು ಹದಿನೆಂಟು ಗಂಟೆ ಕೆಲ್ಸ ಮಾಡೋದನ್ನಾ ಬಿಡ್ತೀನಿ. ದಿನಕ್ಕೆ ಬರೀ ಒಂದೆರಡು ಗಂಟೆ ಫ್ಯಾಕ್ಟರಿಯಲ್ಲಿ ಇದ್ದು ಉಳಿದ ಸಮಯದಲ್ಲಿ ವ್ಯಾಯಾಮ, ಓದು, ಸಿನಿಮಾ, ಪ್ರವಾಸ ಎಲ್ಲ ಮಾಡಿಕೊಂಡು ಇರ್ತೀನಿ. ಎಲ್ಲ ಕೆಲಸಗಾರರು ಬಿಟ್ಟು ಹೋಗೋವರೆಗೂ ನಡೆಸ್ತೀನಿ’ ಅಂತ ಹೇಳಿ ಚೆನ್ನಾಗಿ ನಡೀತಿದ್ದ ‘ಉದಯ್್ಸ ಮ್ಯಾಜಿಕ್ ವರ್ಲ್್ಡನ ವೆಬ್​ಸೈಟನ್ನು ತೆಗೆದು ಹಾಕಿ, ನನ್ನ ಗ್ರಾಹಕರಿಗೆ ‘ನಾನು ನಿಧಾನಕ್ಕೆ ಬಿಜಿನೆಸ್ ಮುಚ್ಚುತ್ತೇನೆ, ಯಾರೂ ನನ್ನನ್ನೇ ಅವಲಂಬಿಸಬೇಡಿ’ ಅಂತ ತಿಳಿಸಿದೆ. ನಂತರ ಕಳೆದ ಹದಿನೈದು ವರ್ಷದಲ್ಲಿ ಒಬ್ಬೊಬ್ಬರೇ ಅವರವರ ಕಾರಣಗಳಿಗಾಗಿ ಕೆಲಸ ಬಿಡ್ತಾ ಹೋದ್ರು. ಉಳಿದವರಿಗೆ ಅಗತ್ಯವಿದ್ದಾಗ ಮೂರು ಲಕ್ಷದವರೆಗೂ ಸಾಲ ಕೊಟ್ಟೆ, ಸಾಲವನ್ನು ಹಿಂತಿರುಗಿಸದೇ ಕೆಲಸ ಬಿಡ್ಲಿ ಅಂತ. ಐದಾರು ಜನ ನಾನು ಅಂದುಕೊಂಡಂತೆ ಕೈ ಕೊಟ್ರು. ಒಬ್ರು ತೀರಿಕೊಂಡ್ರು. ಕಡೆಗೆ ಎಂಭತ್ತು ಜನರಿಂದ ಈಗ ಅತಿ ನಂಬಿಕಸ್ಥ ಐದು ಜನ ಮಾತ್ರ ಉಳ್ಕೊಂಡಿದ್ದಾರೆ. ಹೀಗೆ ವ್ಯಾಪಾರ ಶೇಕಡ 90ರಷ್ಟು ಕಮ್ಮಿ ಆಗಿಹೋಯಿತು. ಇಷ್ಟೆಲ್ಲ ಆದ್ರೂ ನನ್ನ ಸಂಬಂಧಿ ಸಿಎ ಮಾತ್ರ ಅಷ್ಟೇ ಚಾರ್ಜ್ ಅಂದ್ರೆ ಅರುವತ್ತೆರಡು ಸಾವಿರ ತಗೋತಾನೇ ಇದ್ರು. ವ್ಯಾಪಾರದ ಕಡೆಗೆ ಪೂರ್ತಿ ಗಮನ ಕೊಟ್ಟಿದ್ದರಿಂದ ಇವರು ಜಾಸ್ತಿ ಚಾರ್ಜ್ ಮಾಡುತ್ತ ಇದ್ದದ್ದು ಗಮನಕ್ಕೆ ಬಂದಿರಲಿಲ್ಲ. ಗಮನಕ್ಕೆ ಬಂದಾಗಲೂ ಚೌಕಾಸಿ ಮಾಡಲಿಲ್ಲ, ಯಾಕಂದ್ರೆ ಸಂಬಂಧಿ! ವ್ಯಾಪಾರ ಕಮ್ಮಿ ಆಗುತ್ತ ಬಂದಂತೆ ಇದು ಹೊರೆ ಅನ್ನಿಸ್ತು. ಆದ್ದರಿಂದ ನೇರವಾಗಿ ಕೇಳೋದು ಬೇಡವೆಂದು ನನ್ನ ತಮ್ಮನ ಮುಖಾಂತರ ಕೇಳಿಸಿದೆ. ಅದಕ್ಕೆ ಅವರು ‘ಅಯ್ಯೋ, ನಾನು ಜಾಸ್ತಿ ಟರ್ನ್​ಓವರ್ ಇದ್ದಾಗ ಜಾಸ್ತಿ ತಗೋಬೇಕಾಗಿತ್ತು. ಆದ್ರೆ ತಗೊಂಡಿಲ್ಲ. ಆದ್ರಿಂದ ಅದೇ ಚಾರ್ಜ್ ಮಾಡ್ತಾ ಇದ್ದೀನಿ’ ಅಂತ ಅಂದ. ಏನೂ ಹೇಳಲಿಲ್ಲ, ಯಾಕಂದ್ರೆ ಸಂಬಂಧಿ.

    ಇಲ್ಲಿ ಒಂದು ವಿಚಾರ ಗಮನಿಸಿ. ಜಾಸ್ತಿ ಟರ್ನ್​ಓವರ್ ಇದ್ದಾಗ ಜಾಸ್ತೀನೇ ತಗೊಂಡಿದ್ದಾರೆ. ಅರುವತ್ತೆರಡು ಸಾವಿರ ಕಮ್ಮಿನಾ? ಇನ್ನೂ ಜಾಸ್ತಿ ಕೇಳಿದ್ರೆ ಆಗ್ಲೆ ಅವರನ್ನ ಬಿಟ್ಟಿರುತ್ತಿದ್ದೆನೋ ಏನೋ? ಅಲ್ಲದೆ ಜಾಸ್ತಿ ತಗೋಬೇಕಾಗಿತ್ತಾದ್ರೆ ತಗೊಳ್ಳದೇ ಇರೋದು ಅವ್ರ ತಪು್ಪ. ವ್ಯಾಪಾರದಲ್ಲಿ ನೀವು ಹತ್ತು ರೂಪಾಯಿಗೆ ಮಾರಬೇಕಾಗಿರೋ ವಸ್ತುನಾ ಏಳು ರೂಪಾಯಿಗೆ ಕೊಡ್ತಾ ಇದ್ದೀರಿ ಅಂತ ಅಂದ್ಕೊಳ್ಳಿ. ಆ ಮೇಲೆ ಏಳು ರೂಪಾಯಿಗೆ ಮಾರಿದ್ರೆ ನಷ್ಟ ಆಗುತ್ತೆ ಅನ್ನಿಸಿದ್ರೆ ನೀವು ಹತ್ತು ಕೊಡಿ ಅಂತ ಕೇಳ್ಬೇಕೇ ಹೊರತು ಇನ್ನು ಯಾವುದೋ ಏಳು ರೂಪಾಯಿಗೆ ಮಾರೋ ಐಟಂಗೆ ಮೂರು ರೂಪಾಯಿ ಸೇರ್ಸಿ ಹತ್ತು ರೂಪಾಯಿಗೆ ಮಾರಿ ನಷ್ಟನಾ ಸರಿದೂಗಿಸುತ್ತೇನೆ ಅನ್ಕೊಂಡ್ರೆ ಅದು ದೊಡ್ಡ ತಪು್ಪ. ಯಾಕಂದ್ರೆ ಏಳು ರೂಪಾಯಿ ಮಾಲನ್ನು ಹತ್ತು ರೂಪಾಯಿಗೆ ಮಾರ್ತೀರಿ ಅನ್ನೋದು ಗೊತ್ತಾದ್ರೆ ಗಿರಾಕಿ ನಿಮ್ಮ ಕೈಬಿಟ್ಟು ಹೋಗ್ತಾನೆ. ಇಲ್ಲ ಕಡಿಮೆ ಇರೋ ಐಟಂ ನಿಮ್ಮಿಂದ ಪಡೆದು ಇನ್ನೊಂದನ್ನು ಬೇರೆ ಅಂಗಡಿಯಿಂದ ಖರೀದಿಸ್ತಾನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಏನಂದ್ರೆ ಒಂದು ತಪ್ಪನ್ನಾ ಸರಿ ಮಾಡೋಕೆ ಇನ್ನೊಂದು ತಪ್ಪನ್ನು ಮಾಡೋದು ಸಲ್ಲ.

    ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರ ರಿಟರ್ನ್್ಸ ಮಾಡೋದಕ್ಕೆ ಕೊಟ್ಟೆ. ಅವರದ್ದು ನಿಲ್ ರಿಟರ್ನ್್ಸ ಇದ್ರೂನೂ ಮೂರು ಸಾವಿರ ಚಾರ್ಜ್ ಮಾಡಿದ್ರು! ನನ್ನ ಸ್ನೇಹಿತ ಸಿಎ ವಿರೂಪಾಕ್ಷನಿಗೆ ಕೊಟ್ಟಿದ್ರೆ ಐನೂರು ರೂಪಾಯಿಗೆ ರೆಡಿ ಮಾಡಿ ಕೊಡ್ತಿದ್ದ. ಈ ನನ್ನ ಸಂಬಂಧಿ ನನಗೆ ಗೊತ್ತಿರೋವರಿಗೆ ಐನೂರಕ್ಕೆ ಮಾಡಿಕೊಟ್ಟಿದ್ದು ನೋಡಿದ್ದಿನಿ. ಒಂದಿನ ನಾನು ಅವರ ಆಫೀಸಿನಲ್ಲಿ ಕೂತಿದ್ದಾಗ ಯಾರೋ ಒಬ್ಬರಿಗೆ ಹದಿನೇಳು ಸಾವಿರ ರೂಪಾಯಿ ಕನ್ಸಲ್ಟೇಶನ್ ಫೀ ಕೇಳಿದ್ರು.

    ಗಿರಾಕಿ ನಾನು ಸಾವಿರಕ್ಕಿಂತ ಒಂದು ಪೈಸಾನೂ ಜಾಸ್ತಿ ಕೊಡಲ್ಲ ಅಂತ ಹೇಳಿ ಸಾವಿರ ರೂಪಾಯಿ ಟೇಬಲ್ ಮೇಲೆ ಇಟ್ಟ. ಸಿಎ ಗೊಣಗುತ್ತ ದುಡ್ಡನ್ನು ಜೇಬಿಗೆ ಇಳ್ಸಿದ್ರು. ಆದ್ರೆ ನನಗೆ ಹಾಗೆ ಮಾಡಲು ಆಗೋಲ್ಲ ನೋಡಿ.. ಯಾಕಂದ್ರೆ ಸಂಬಂಧಿ. ಸಂಬಂಧ ಕಡಿದು ಹೋಗುತ್ತೆ ಅನ್ನೋ ಭಯ ನಂಗೆ ಮಾತ್ರ. ಅದು ಅವರಿಗಿರಲಿಲ್ಲ. ಸಂಬಂಧ ಮಾತ್ರ ಉಳಿಸಿಕೊಳೋದಕ್ಕಾಗಿ ಈ ವರ್ಷದಿಂದ ಬೇರೆ ಸಿಎಯನ್ನು ಗೊತ್ತು ಮಾಡಿದ್ದೀನಿ. ಅವರು ಅರ್ಧ ಚಾರ್ಜಿಗೆ ಒಪ್ಪಿಕೊಂಡಿದ್ದಾರೆ. ಸಂಬಂಧದ ಜೊತೆಯಲ್ಲಿ ಹಣವೂ ಉಳೀತು.

    ನಿಮ್ಮ ಮನೆಯ ಹೆಣ್ಣು ಕೊಟ್ಟ ಕಡೆಯ ಸಂಬಂಧಿಕರೊಂದಿಗೆ ವ್ಯವಹಾರ ಮಾಡುವುದಾಗಲಿ, ಸಾಲ ಕೊಡುವುದಾಗಲಿ ಮಾಡಲೇಬೇಡಿ. ಮಾಡಿದ್ರೆ ಪಶ್ಚಾತ್ತಾಪ ಪಡುವುದು ಗ್ಯಾರಂಟಿ. ಹಣ ಕೇಳಿದರೆ ‘ನಾವೇನು ನಿಮ್ಮ ದುಡ್ಡನ್ನು ತಿಂದುಹಾಕ್ತೀವೇನ್ರಿ. ಇವತ್ತಲ್ಲ ನಾಳೆ ಕೊಟ್ಟೇ ಕೊಡ್ತೀವಿ’ ಅನ್ನೋ ಧಮ್ಕಿ ಅಲ್ಲದೇ ಮಗಳಿಗೆ ಕಿರುಕುಳ ಕೊಡುವ ಭಯ ಬೇರೆ. ಇದನ್ನಾ ಕೆಲವರಿಗೆ ಹೇಳಿದ್ರೆ ‘ನನ್ಗೂ ಏನಾಯ್ತೂಂದ್ರೆ…’ ಅಂತ ರಾಗ ಎಳೆದು ಅವರ ಅನುಭವದ ಕಥೆ ಶುರುಮಾಡ್ತಾರೆ. ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದ್ದನ್ನೇ ಹೇಳೋದೇನಂದ್ರೆ ಸಂಬಂಧಿಕರ ಜತೆ ವ್ಯವಹಾರ ಮಾಡಲೇಬೇಡಿ,. ನಿಮ್ಮ ಹಣ, ಐಡಿಯಾ ಎಲ್ಲ ನಿಮ್ಮ ಹತ್ರಾನೇ ಇರಲಿ. ಸ್ನೇಹ-ಸಂಬಂಧ-ಹಣ ಚಿರಕಾಲ ಉಳಿಯಲಿ. ಅಂದ ಹಾಗೆ ನನ್ನ ಸಂಬಂಧಿಕ ರೊಬ್ಬರಿಗೆ ಸ್ವಲ್ಪ ಹಣ ಬೇಕಿತ್ತು. ನೀವೇನಾದ್ರೂ ಹೆಲ್ಪ್ ಮಾಡ್ತೀರಾ? ಪ್ಲೀ…ಸ್

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಅಪ್ಪುಗಾಗಿ ಚಿತ್ರರಂಗದಿಂದ ‘ಪುನೀತ ನಮನ’: ಎಲ್ಲಿ-ಹೇಗೆ ನಡೆಯುತ್ತೆ, ಯಾರ್ಯಾರು ಭಾಗಿ?; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts