ಬೆಂಗಳೂರು: ಹೊಸ ವರ್ಷದ ಆಚರಣೆಯ ವೇಳೆ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ವಿಶೇಷ ಆಚರಣೆ ಸ್ಥಳಗಳನ್ನು ಬಿಬಿಎಂಪಿ ಗುರುತಿಸಿ ಅಲ್ಲಿ ಕಸದ ಬಿನ್ಗಳನ್ನು ಇಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂಬುಲೆನ್ಸ್, ವೈದ್ಯರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿ ಶಾಮಕ ಸೇವೆ ಕಲ್ಪಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಜತೆಗೆ ನಗರದ ವಿವಿಧೆಡೆ 1 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಿಬಿಎಂಪಿ ಪ್ರಹರಿ ಮತ್ತು ಬಿಎಂಟಿಸಿ ಸಾರಥಿ ವಾಹನ ರಾತ್ರಿ ಸಂಚರಿಸುತ್ತವೆ. ಜನಸಂದಣಿ ಹೆಚ್ಚಿರುವ ಕಡೆಗೆ ಬಸ್ಗಳು ಚಲಿಸುತ್ತವೆ ಎಂದರು.
ಸಾರ್ವಜನಿಕರ ಸುರಕ್ಷತೆಗೆ ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಆಚರಣೆ ವೇಳೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡದೇ, ತಾತ್ಕಾಲಿಕ ಅಳವಡಿಸಲಾದ ಶೌಚಾಗೃಹಗಳನ್ನು ಬಳಸಬೇಕು. ಹೋಟೆಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ರಸ್ತೆಗಳ ಮೇಲೆ ಬಿಸಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಬಿಬಿಎಂಪಿ (080-22660000), ಪೊಲೀಸ್ (100) ಆಂಬುಲೆನ್ಸ್ (108) ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.